
ಲಂಡನ್, ಏ.19-ಉಗ್ರವಾದವನ್ನೇ ಬಂಡವಾಳ ಮಾಡಿಕೊಂಡಿರುವವರಿಗೆ ಅವರದೇ ಭಾಷೆಯಲ್ಲಿ ತಿರುಗೇಟು ನೀಡಲು ನನಗೆ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಲಂಡನ್ನಲ್ಲಿ ನಿನ್ನೆ ರಾತ್ರಿ ಅನಿವಾಸಿ ಭಾರತೀಯರೊಂದಿಗೆ ನಡೆದ ಭಾರತ್ ಸಬ್ ಕೇ ಸಾಥ್ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದರು.
ಭಾರತವೂ ಎಂದಿಗೂ ತನ್ನ ಅಕ್ಕಪಕ್ಕದ ದೇಶಗಳ ನೆಲವನ್ನು ಕಬಳಿಸಲು ಯತ್ನಿಸಿಲ್ಲ. ಅದೇ ರೀತಿ ನೆರೆ ರಾಷ್ಟ್ರಗಳು ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಹೇಳಿದರು.
ಸರ್ಜಿಕಲ್ ಸ್ಟ್ರೈಕ್ ಕುರಿತು ಪ್ರಸ್ತಾಪಿಸಿದ ಅವರು ಯಾರಿಗೆ ಯಾವ ಭಾಷೆಯಲ್ಲಿ ಉತ್ತರ ನೀಡಬೇಕೆಂಬುದು ನನಗೆ ಚೆನ್ನಾಗಿ ತಿಳಿದಿದೆ. ಉರಿ ಸೇನಾ ನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಯಿತು. ಈ ಕಾರ್ಯಾಚರಣೆ ಶೇ.100ರಷ್ಟು ಯೋಜನಿತ ಯಶಸ್ವಿ ದಾಳಿಯಾಗಿತ್ತು. ಈ ಕಾರ್ಯಾಚರಣೆ ನಂತರ ಪಾಕಿಸ್ತಾನಕ್ಕೂ ಮಾಹಿತಿ ನೀಡಲಾಗಿತ್ತು ಎಂದು ಮೋದಿ ತಿಳಿಸಿದರು.