ದೇಶಾದ್ಯಂತ ಕರೆನ್ಸಿ ನೋಟುಗಳ ತೀವ್ರ ಅಭಾವ :

ಬೆಂಗಳೂರು/ಹೈದರಾಬಾದ್, ಏ.19-ದೇಶಾದ್ಯಂತ ಕರೆನ್ಸಿ ನೋಟುಗಳ ತೀವ್ರ ಅಭಾವ ತಲೆದೋರಿ ಎಟಿಎಂಗಳಲ್ಲಿ ನೋಟುಗಳ ಖಾಲಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಸಮಸ್ಯೆ ನಿವಾರಣೆಗೆ ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಇದೇ ವೇಳೆ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಹಣವನ್ನು ಗುಪ್ತವಾಗಿ ಸಂಗ್ರಹಿಸಲಾಗಿದೆ ಎಂದು ಹೇಳಲಾದ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಭಾರೀ ಅಕ್ರಮಗಳನ್ನು ಪತ್ತೆ ಮಾಡುತ್ತಿದ್ದಾರೆ.
2,000 ನೋಟುಗಳ ಕೊರತೆ ನಿವಾರಿಸಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಇದೇ ವೇಳೆ ಕೃತಕ ಅಭಾವ ಸೃಷ್ಟಿಗೆ ಕಾರಣರಾದವರ ಮೇಲೆ ಹದ್ದಿನ ಕಣ್ಣಿನ ನಿಗಾ ಇಟ್ಟಿರುವ ತೆರಿಗೆ ಅಧಿಕಾರಿಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿ ಅದರಲ್ಲೂ ಕರ್ನಾಟಕ ಮತ್ತು ಆಂಧ್ರಪ್ರದೇಶಗಳ 40 ಕಡೆಗಳಲ್ಲಿ ದಾಳಿಗಳನ್ನು ನಡೆಸಿ ಅಕ್ರಮ ಮತ್ತು ಗೌಪ್ಯ ಕರೆನ್ಸಿ ಸಂಗ್ರಹಗಳನ್ನು ಪತ್ತೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಶಪಡಿಸಿಕೊಂಡ ಕರೆನ್ಸಿಗಳ ನಿಖರ ಮೌಲ್ಯದ ಬಗ್ಗೆ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ತಮ್ಮ ಮುಂದಿನ ಕಾರ್ಯಾಚರಣೆಗೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಇದನ್ನು ಗೋಪ್ಯವಾಗಿ ಇಟ್ಟಿದ್ದಾರೆ.  ಕರ್ನಾಟಕ ಮತ್ತು ಆಂಧ್ರದಲ್ಲಿ ದಾಳಿ ನಡೆಸಿದ ಬೆನ್ನಲ್ಲೇ ದೇಶದ ಉಳಿದ ರಾಜ್ಯಗಳಲ್ಲೂ ಕಾರ್ಯಾಚರಣೆ ಮುಂದುವರಿದಿದೆ.
ದಾಳಿಗಳ ವೇಳೆ ವಶಪಡಿಸಿಕೊಳ್ಳಲಾದ ಕರೆನ್ಸಿಗಳ ಸಂಬಂಧ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಹಣವನ್ನು ಸಂಗ್ರಹ ಮಾಡಲಾಗಿತ್ತೇ ಎಂಬುದೂ ಸೇರಿದಂತೆ ವಿವಿಧ ಕೋನಗಳಿಂದಲೂ ತನಿಖೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ