ಮಹಾಲಕ್ಷ್ಮಿ ಲೇಔಟ್ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ, 330ಕ್ಕೂ ಹೆಚ್ಚು ವಿವಿಧ ಮೋರ್ಚಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ

ಬೆಂಗಳೂರು, ಏ.19-ಮಹಾಲಕ್ಷ್ಮಿ ಲೇಔಟ್ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ. ನೆ.ಲ.ನರೇಂದ್ರಬಾಬು ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಮಂಡಲ ಅಧ್ಯಕ್ಷ ಪ್ರಸನ್ನಕುಮಾರ್, ನಗರ ಘಟಕದ ಉಪಾಧ್ಯಕ್ಷ ಮಾಜಿ ಉಪಮೇಯರ್ ಎಸ್.ಹರೀಶ್, ಕಾರ್ಯಕಾರಿಣಿ ಸದಸ್ಯ ಹಾಗೂ ಟಿಕೆಟ್ ಆಕಾಂಕ್ಷಿ ಎಂ.ನಾಗರಾಜ್ ಸೇರಿದಂತೆ ಸುಮಾರು 330ಕ್ಕೂ ಹೆಚ್ಚು ವಿವಿಧ ಮೋರ್ಚಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

ಮಾಜಿ ಉಪಮೇಯರ್ ಹರೀಶ್ ಅವರ ಮನೆಯಲ್ಲಿ ಸಭೆ ಸೇರಿದ ಬಿಜೆಪಿ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್ ಅವರು, ಮಹಾಲಕ್ಷ್ಮಿ ಲೇಔಟ್‍ನಲ್ಲಿ ಎಂ.ನಾಗರಾಜ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಎಂ.ನಾಗರಾಜ್ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿತ್ತು. ಬಿಜೆಪಿ ಮಂಡಲ ಸೇರಿದಂತೆ ಎಲ್ಲಾ ನಾಯಕರು ಎಂ.ನಾಗರಾಜ್ ಅವರಿಗೆ ಟಿಕೆಟ್ ನೀಡಲು ಒಪ್ಪಿಗೆ ಸೂಚಿಸಿದ್ದರು. ಪಟ್ಟಿಯಲ್ಲೂ ಅವರ ಹೆಸರು ಇತ್ತು. ಆದರೆ ಕೊನೆ ಕ್ಷಣದಲ್ಲಿ ನೆ.ಲ.ನರೇಂದ್ರಬಾಬು ಅವರಿಗೆ ಟಿಕೆಟ್ ನೀಡಲಾಗಿದೆ. ಎಂ.ನಾಗರಾಜ್ ಅವರಿಗೆ ಟಿಕೆಟ್ ಕೈ ತಪ್ಪಲು ಎಸ್.ಎಂ.ಕೃಷ್ಣ ಅವರೇ ಕಾರಣ ಎಂದು ದೂರಿದ್ದಾರೆ.

ನಾವ್ಯಾರು ನರೇಂದ್ರಬಾಬು ಅವರ ಹೆಸರನ್ನು ಶಿಫಾರಸು ಮಾಡಿರಲಿಲ್ಲ. ಎಂ.ನಾಗರಾಜ್ ಅವರ ಹೆಸರನ್ನು ಶಿಫಾರಸು ಮಾಡಿದ್ದೆವು. ಆದರೆ ನರೇಂದ್ರ ಬಾಬು ಅವರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಇದರಿಂದ ನಮಗೆ ಬೇಸರವಾಗಿದೆ. ಗೋಪಾಲಯ್ಯ ಅವರನ್ನು ಸೋಲಿಸಬೇಕೆಂಬ ಗುರಿ ನಮ್ಮದಾಗಿತ್ತು. ಗೋಪಾಲಯ್ಯ ಅವರೇ ತಮ್ಮ ವಿರುದ್ಧ ಡಮ್ಮಿ ಅಭ್ಯರ್ಥಿಯನ್ನು ಹಾಕಿಸಿಕೊಳ್ಳುವ ಹುನ್ನಾರ ನಡೆಸಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು.

ನರೇಂದ್ರ ಬಾಬು ಅವರ ಪರ ನಾವು ಯಾವುದೇ ಕಾರಣಕ್ಕೂ ಕೆಲಸ ಮಾಡುವುದಿಲ್ಲ. ಪಕ್ಷೇತರರಾಗಿ ಕಣಕ್ಕಿಳಿಯುವ ಎಂ.ನಾಗರಾಜ್ ಅವರ ಪರ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ನಾಗರಾಜ್ ಅವರು, ನರೇಂದ್ರಬಾಬು ಅವರು ನಮ್ಮ ಕತ್ತು ಕುಯ್ಯುವ ಕೆಲಸವನ್ನು ಮಾಡಿದ್ದಾರೆ. ಪಕ್ಷಕ್ಕೆ ಬಂದಾಗ ಕಾರ್ಯಕರ್ತನಾಗಿರುತ್ತೇನೆ ಎಂದು ಹೇಳಿದ್ದರು. ಈಗ ಅವರು ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಪಕ್ಷದ ಮುಖಂಡರು ಅವರನ್ನು ಬದಲಾಯಿಸುವುದಾಗಿ ತಿಳಿಸಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ಸಾಧ್ಯವಿಲ್ಲ ಎಂದಿದ್ದಾರೆ. ಈ ಘಟನೆಗಳಿಂದ ಬೇಸತ್ತು ನಾನು ಕಾರ್ಯಕಾರಿಣಿ ಸದಸ್ಯಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರನಾಗಿ ಕಣಕ್ಕಿಳಿಯುತ್ತಿದ್ದೇನೆ. ಮಂಡಲ ಸೇರಿದಂತೆ ಯಾರು ಅವರ ಹೆಸರನ್ನು ಶಿಫಾರಸು ಮಾಡಿಲ್ಲ. ಆದರೂ ಅವರು ಅಭ್ಯರ್ಥಿಯಾಗಿದ್ದಾರೆ. ಹೇಗೆ ಎಂಬುದು ಗೊತ್ತಾಗುತ್ತಿಲ್ಲ ಎಂದರು.

ಸಭೆಯಲ್ಲಿ ಮಂಡಲದ ಅಧ್ಯಕ್ಷ ಪ್ರಸನ್ನ, ಜಯಸಿಂಹ, ಕೃಷ್ಣಮೂರ್ತಿ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ