ತಮಿಳುನಾಡು ನೋಂದಣಿಯ ಬಸ್‌ನಲ್ಲಿ ಸಿಕ್ತು ದಾಖಲೆ ಇಲ್ಲದ 52 ಲಕ್ಷ ನಗದು!

ಬೆಂಗಳೂರು,ಏ.19:ದಾಖಲೆಯಿಲ್ಲದೇ ತಮಿಳುನಾಡು ನೋಂದಣಿ ಬಸ್‌‌ನಲ್ಲಿ ಸಾಗಿಸಲಾಗುತ್ತಿದ್ದ ಭಾರೀ ಪ್ರಮಾಣದ ನಗದನ್ನು ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಣಿಕ್ರಾಸ್ ಚೆಕ್ ಪೋಸ್ಟ್ ಬಳಿ ಬುಧವಾರ ರಾತ್ರಿ ಈ ಕಾರ್ಯಾಚರಣೆ ನಡೆಸಲಾಗಿದೆ. ಕರ್ನಾಟಕಕ್ಕೆ ಬರುತ್ತಿದ್ದ ತಮಿಳುನಾಡು ನೋಂದಣಿಯ ಕೆಪಿಎನ್ ಬಸ್‌‌‌ನಲ್ಲಿ 52ಲಕ್ಷ 70 ಸಾವಿರ ನಗದನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ರಾಣೆ ಕ್ರಾಸ್ ಚೆಕ್ ಪೋಸ್ಟ್ ಬಳಿ ಬಸ್ ತಡೆದು ಪರಿಶೀಲನೆ ನಡೆಸಿದಾಗ ವ್ತಕ್ತಿಯೊಬ್ವರ ಬಳಿಯಿದ್ದ ಬ್ರೀಫ್ ಕೇಸ್‌‌‌ನಲ್ಲಿ ಹಣ ಪತ್ತೆಯಾಗಿದೆ.

ತಮಿಳುನಾಡು ನೋಂದಣಿಯ ಬಸ್ ಆಂಧ್ರದಿಂದ ಬೆಂಗಳೂರಿಗೆ ಬರುತ್ತಿತ್ತು. ಬಸ್ ಮೂಲಕ ಹಣವನ್ನು ನಗರಕ್ಕೆ ಸಾಗಿಸಿದರೆ ಅನುಮಾನ ಬರುವುದಿಲ್ಲ ಎಂದು ಹಣ ಸಾಗಣೆ ಮಾಡುವವರು ಯೋಚಿಸಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಹಣದ ಮೂಲದ ಬಗ್ಗೆ ಆತ ಯಾವುದೇ ಮಾಹಿತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಣ ವಶಪಡಿಸಿಕೊಳ್ಳಲಾದ ಸ್ಥಳಕ್ಕೆ ಜಿಲ್ಲಾಧಿಕಾರಿ ಪಾಲಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ