ಮೈಸೂರು,ಏ.19
ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಜೆಡಿಎಸ್ ಪಕ್ಷದಲ್ಲಿ ಹೊಸ ಬಿರುಗಾಳಿ ಎದ್ದಿದೆ. ಕೆ.ಆರ್.ಕ್ಷೇತ್ರದ ಶಾಸಕ ಸಾರಾ ಮಹೇಶ್ ಅವರನ್ನು ಸೋಲಿಸುವಂತೆ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ಅವರು ಒಕ್ಕಲಿಗ ಮುಖಂಡರಿಗೆ ಕರೆ ನೀಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇದು ತೀವ್ರ ಸಂಚಲನಕ್ಕೆ ಕಾರಣವಾಗಿದೆ.
ಬಹಿರಂಗಗೊಂಡಿರುವ ವಿಡಿಯೋದಲ್ಲಿ ಮಾತನಾಡುತ್ತಿರುವ ಭವಾನಿ ಅವರು ಈಗ ಅಭ್ಯರ್ಥಿಯಾಗಿರುವ ಅಪ್ಪ ಮಗ ಇಷ್ಟು ದೌರ್ಜನ್ಯ ಮಾಡ್ತಾರೆ. ಇನ್ನು ಶಾಸಕ, ಮಂತ್ರಿಯಾದೆ ಸಾವಿರಾರು ಜನರನ್ನು ತುಳಿದು ಸಾಯಿಸ್ತಾರೆ ಎಂದಿದ್ದಾರೆ.
ಇಡೀ ತಾಲೂಕು ಕಾಪಾಡುವ ಜವಾಬ್ದಾರಿ ನನ್ನದು,ನೀವು ಓಪನ್ ಆಗಿ ಕೆಲ್ಸ ಮಾಡಿ. ನನ್ನ ಹೆಸರು ಹೇಳಿಕೊಂಡೆ ಮಾಡಿ ಎಂದಿದ್ದಾರೆ.
ಮೈಸೂರಿನ ಸಾಲಿಗ್ರಾಮದ ಒಕ್ಕಲಿಗರ ಮುಖಂಡರ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಒಕ್ಕಲಿಗ ಮುಖಂಡರು ‘ಅಕ್ಕಾ.. ದೇವೇಗೌಡರ ಮನೆಯಿಂದ ಕರಿನಾಯಿ ತಂದು ನಿಲ್ಸಿದ್ರೂ ಗೆಲ್ಲಿಸ್ತೀವಿ’ ಎಂದಿದ್ದಾರೆ.
ಜೆಡಿಎಸ್ ಶಾಸಕ ಸಾ.ರಾ .ಮಹೇಶ್ ಅವರ ಪುತ್ರ ಯುವಕನೊಬ್ಬನ ಹಲ್ಲೆ ಪ್ರಕರಣ ದಿಂದ ಸುದ್ದಿಯಾಗಿದ್ದರು. ಆ ಬಳಿಕ ಕೆ.ಆರ್.ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರು ಸ್ಪರ್ಧಿಸಲು ಮುಂದಾಗಿದ್ದರು.
ವಿಡಿಯೋವನ್ನು ಸಭೆಯಲ್ಲಿದ್ದ ವ್ಯಕ್ತಿಯೊಬ್ಬರು ಭವಾನಿಯವರ ಹಿಂಬದಿಯಲ್ಲಿ ನಿಂತು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು ಕೊನೆಯಲ್ಲಿ ಭವಾನಿ ಅವರು ಮೊಬೈಲ್ ಆಫ್ ಮಾಡಪ್ಪ ಎಂದಿರುವುದೂ ದಾಖಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಾರಾ ಮಹೇಶ್ ‘ಇದು ನನ್ನ ಬಗ್ಗೆ ಹೇಳಿದ್ದಲ್ಲ. ವಿರೋಧಿ ಕಾಂಗ್ರೆಸ್ ಅಭ್ಯರ್ಥಿಯ ಕುರಿತು ಹೇಳಿರುವುದು’ ಎಂದಿದ್ದಾರೆ.
ಈ ಬಗ್ಗೆಶಾಸಕ ಸಾರಾ ಮಹೇಶ್, ಜೆಡಿಎಸ್ ನಾಯಕರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಯಾವ ಪ್ರತಿಕ್ರಿಯೆ ನೀಡುತ್ತಾರೋ ಕಾದುನೋಡಬೇಕು