ಬೆಂಗಳೂರು, ಏ.18-ಯಾರು ಏನೇ ಹೇಳಿದರೂ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದ್ದು, ಕರ್ನಾಟಕದಲ್ಲಿ ನಾವು ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಲಯದ ಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಜನತೆ ತುದಿಗಾಲಲ್ಲಿ ನಿಂತಿದ್ದಾರೆ ಎಂದರು.
ಈ ಬಾರಿ ಬಿಜೆಪಿ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುವುದರಲ್ಲಿ ಯಾವ ಸಂಶಯವೂ ಬೇಡ ಎಂದರು.
2014 ರಿಂದ ಇಲ್ಲಿಯವರೆಗೆ ನಾವು 22 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದ್ದೇವೆ. ಬೂತ್ಮಟ್ಟದ ಕಾರ್ಯಕರ್ತರ ಪರಿಶ್ರಮದಿಂದ ಖಾತೆಯನ್ನು ತೆರೆಯಲು ಸಾಧ್ಯವಾಗದಿದ್ದ ತ್ರಿಪುರಾದಲ್ಲಿ ಭಾರೀ ಬಹುಮತದ ಮೂಲಕ ಅಧಿಕಾರ ಹಿಡಿದೆವು. ಇದು ನಮ್ಮ ಪಕ್ಷದ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಕ್ಷದ ಗೆಲುವಿಗೆ ಬೂತ್ಮಟ್ಟದ ಕಾರ್ಯಕರ್ತರೇ ಕಾರಣ. ಬಿಜೆಪಿ ಕಾರ್ಯಕರ್ತರ ಪಕ್ಷವೇ ಹೊರತು ನಾಯಕರ ಪಕ್ಷವಲ್ಲ. ಕರ್ನಾಟಕದಲ್ಲೂ ಪಕ್ಷ ಸಾಕಷ್ಟು ಪ್ರಬಲವಾಗಿರುವುದರಿಂದ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಖಚಿತ ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಜೀವನ ಆರಂಭವಾಗಿದ್ದೆ ಬೂತ್ ಕಮಿಟಿ ಅಧ್ಯಕ್ಷನಾಗಿ ಎಂದ ಅವರು, ಒಬ್ಬ ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಬಹುದು. ಪೆÇೀಸ್ಟರ್ ಅಂಟಿಸುತ್ತಿದ್ದ ವ್ಯಕ್ತಿ ರಾಷ್ಟ್ರೀಯ ಅಧ್ಯಕ್ಷನಾಗುವುದು ಬಿಜೆಪಿಯಲ್ಲಿ ಮಾತ್ರ. ಕರ್ನಾಟಕದಲ್ಲಿ ಕಾಂಗ್ರೆಸ್ ತೊಲಗಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಜ್ಜಾಗಬೇಕೆಂದು ಕರೆ ನೀಡಿದರು.
ಕರ್ನಾಟಕದ ಗೆಲುವು ಸಾಮಾನ್ಯ ವಿಜಯವಲ್ಲ. ದಕ್ಷಿಣದಲ್ಲಿ ಬಿಜೆಪಿಯ ವಿಜಯದ್ವಾರ ತೆಗೆಯಲು ಈ ಗೆಲುವು ನಮಗೆ ಅತ್ಯಮೂಲ್ಯ ಇಲ್ಲಿ ಗೆದ್ದರೆ ಆಂಧ್ರ, ತಮಿಳುನಾಡು, ತೆಲಂಗಾಣ ಸೇರಿದಂತೆ ಮತ್ತರ ಕಡೆ ನಾವು ಖಾತೆ ಆರಂಭಿಸಬಹುದು ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ಪಟ್ಟಿ ಮಾಡಿ ವಿವರಿಸಲು 4 ದಿನ ಬೇಕು. ಸಮಾಜವಾದಿ ಎನ್ನುವ ಇವರು 60 ಲಕ್ಷ ಮೌಲ್ಯದ ವಾಚ್ ಕಟ್ಟಿಕೊಳ್ಳುತ್ತಾರೆ. ಈ ವಾಚ್ನ್ನು ಯಾರು ಕೊಟ್ಟರು, ಏಕೆ ಕೊಟ್ಟರು ಎಂಬುದನ್ನು ಅವರು ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ 25ಕ್ಕೂ ಹೆಚ್ಚು ಹಿಂದೂ ಯುವಕರ ಹತ್ಯೆಯಾಗಿದೆ. ಕಾಂಗ್ರೆಸ್ ಸರ್ಕಾರ ಈ ಹಂತಕರನ್ನು ಎಲ್ಲಿಯವರೆಗೂ ರಕ್ಷಣೆ ಮಾಡುತ್ತದೆಯೋ ಮಾಡಲಿ. ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದೂ ಯುವಕರನ್ನು ಹತ್ಯೆ ಮಾಡಿರುವ ಪಾತಕಿಗಳು ಪಾತಾಳದಲ್ಲಿ ಅಡಗಿದ್ದರೂ ಎಳೆದು ತಂದು ಶಿಕ್ಷಿಸುತ್ತೇವೆ ಎಂದು ಗುಡುಗಿದರು.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರು ಪದೇ ಪದೇ ಹಿಂದೂ ಟೆರರಿಸಂ (ಹಿಂದೂ ಭಯೋತ್ಪಾದನೆ) ಎಂದು ಟೀಕೆ ಮಾಡುತ್ತಿದ್ದರು. ಮಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸಿಮಾನಂದ ಸೇರಿದಂತೆ ಎಲ್ಲರೂ ದೋಷ ಮುಕ್ತರಾಗಿದ್ದಾರೆ. ರಾಹುಲ್ಗಾಂಧಿ ಈಗ ದೇಶದ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಇಂದು ಜಗತ್ತಿಗೆ ಸಮಾನತೆ ಸಾರಿದ ಜಗಜ್ಯೋತಿ ಬಸವಣ್ಣನವರ ಜಯಂತಿ ಅಂತಹ ಪವಿತ್ರ ದಿನದಂದು ನಾನು ಕರ್ನಾಟಕಕ್ಕೆ ಬಂದಿರುವುದು ಪೂರ್ವಜನ್ಮದ ಪುಣ್ಯ. ನಾನು ಮತ್ತು ಯಡಿಯೂರಪ್ಪನವರು ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದೆವು. ಅದು ಕೇವಲ ಪ್ರತಿಮೆಗೆ ಮಾಡಿದ ಮಾಲಾರ್ಪಣೆಯಲ್ಲ. ಅವರ ಸಿದ್ಧಾಂತಕ್ಕೆ ಮಾಡಿದ ಮಾಲಾರ್ಪಣೆ ಎಂದು ಪ್ರಶಂಸಿಸಿದರು.
ವಿಶ್ವದ ಮೊದಲ ಸಂಸತ್ತನ್ನು ಅನುಭವ ಮಂಟಪದ ಹೆಸರಿನಲ್ಲಿ ಸ್ಥಾಪಿಸಿದರು. ಸಮಾಜದ ಹಲವು ನ್ಯೂನ್ಯತೆ ತೊಡೆದು ಹಾಕಿದರು. ಅಂತಹ ವ್ಯಕ್ತಿ ನಮಗೆ ಸ್ಫೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ, ರಾಜಕೀಯ ಸ್ವಾರ್ಥಕ್ಕಾಗಿ ಜಾತಿ ವಿಷ ಬೀಜ ಬಿತ್ತಿ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲ್ಗೆ ಈ ಬಾರಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ನಾನು 3 ಬಾರಿ ರಾಜ್ಯ ಸುತ್ತಿದ್ದೇನೆ. ಜನತೆಯ ನಾಡಿಮಿಡಿತ ನನಗೆ ಗೊತ್ತು. ಬೆಂಗಳೂರಿನಲ್ಲಿ ಯಾರೇ ಅಭ್ಯರ್ಥಿ ಕಣಕ್ಕಿಳಿದರೂ ಅವರ ಮುಖ ನೋಡದೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕಬೇಕೆಂದು ಕರೆ ಕೊಟ್ಟರು.
ಕೇಂದ್ರ ಸಚಿವ ಅನಂತ್ಕುಮಾರ್ ಮಾತನಾಡಿ, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ನಾವು 25 ಕ್ಷೇತ್ರ ಗೆಲ್ಲುವುದು ಶತಸಿದ್ಧ. ರಾಜಧಾನಿ ಬೆಂಗಳೂರು ಗೆದ್ದರೆ ನಮ್ಮ ಮಿಷನ್ 150 ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಡಿ.ವಿ.ಸದಾನಂದಗೌಡ, ರಾಜ್ಯ ಉಸ್ತುವಾರಿ ಮುರಳೀಧರ್ರಾವ್, ಶಾಸಕರಾದ ವಿಜಯ್ಕುಮಾರ್, ನಂದೀಶ್ರೆಡ್ಡಿ, ಡಾ.ಅಶ್ವತ್ಥನಾರಾಯಣ, ರವಿ ಸುಬ್ರಮಣಿ, ನಾರಾಯಣಸ್ವಾಮಿ ಮತ್ತಿತರರಿದ್ದರು.