ಸಂಸದೆ ಶೋಭಾ ಕರಂದ್ಲಾಜೆ ಮೊದಲು ವೈದ್ಯರ ಬಳಿ ಸರಿಯಾಗಿ ಪರೀಕ್ಷಿಸಿಕೊಳ್ಳಲಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಏ.18- ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಯೋಗ್ಯತೆ ಸಿದ್ದರಾಮಯ್ಯನವರಿಗಿಲ್ಲ ಎಂದು ಹೇಳಿಕೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಏನೋ ಸಮಸ್ಯೆ ಇದೆ. ಮೊದಲು ವೈದ್ಯರ ಬಳಿ ಸರಿಯಾಗಿ ಪರೀಕ್ಷಿಸಿಕೊಳ್ಳಲಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆ ಖಂಡನೀಯ. ಸಿದ್ದರಾಮಯ್ಯನವರು ಬಸವೇಶ್ವರ ಜಯಂತಿ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಕಟ್ಟಾ ಬಸವಣ್ಣನವರ ಅನುಯಾಯಿ ಎಂದರು.

ಕಾಂಗ್ರೆಸ್ ಪಕ್ಷ ಕೂಡ ಬಸವಣ್ಣನವರ ತತ್ವ ಸಿದ್ದಾಂತಗಳ ಮೇಲೆ ನಂಬಿಕೆ ಇಟ್ಟಿದೆ ಮತ್ತು ಅದೇ ಮಾರ್ಗದಲ್ಲಿ ನಡೆಯುತ್ತಿದೆ. ಸರ್ಕಾರ ಕೂಡ ಬಸವಣ್ಣನವರ ಆದರ್ಶಗಳಂತೆ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಹೇಳಿದರು.

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ್ದೇ ನಮ್ಮ ಸರ್ಕಾರ. ಇದನ್ನು ಯಡಿಯೂರಪ್ಪ ಸೇರಿದಂತೆ ಜೆಡಿಎಸ್ ಅರಿತುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಸರ್ಕಾರ ಇರುವುದು ಧರ್ಮವನ್ನು ಒಡೆಯಲಿಕ್ಕಲ್ಲ. ಒಗ್ಗೂಡಿಸಲು. ಸಿಎಂ ಅವರು ಧರ್ಮ ವಿಭಜನೆ ಮಾಡಿದ್ದಾರೆ. ಬಸವಣ್ಣನವರ ಸಿದ್ದಾಂತಗಳಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಬಸವಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಖ್ಯಮಂತ್ರಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

ಲಿಂಗಾಯಿತ ವೀರಶೈವ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ರಚಿಸಲಾಗಿದ್ದ ಸಮಿತಿಯಲ್ಲಿ ಲಿಂಗಾಯಿತರೇ ಇರಲಿಲ್ಲ. ಸಿಎಂ ಅವರು ಯಾವ ಉದ್ದೇಶಕ್ಕಾಗಿ ಸಮಿತಿ ಮಾಡಿದರೋ, ಧರ್ಮ ವಿಭಜನೆಗೆ ಕಾರಣ ಏನು ಎಂಬುದನ್ನು ಡಿ.ಕೆ.ಶಿವಕುಮಾರ್ ಅವರು ಅರಿತುಕೊಳ್ಳಲಿ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ