ಬೆಂಗಳೂರು, ಏ.18- ಚುನಾವಣಾ ಚಾಣುಕ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಳೆದ ರಾತ್ರಿ ರಾಜ್ಯಕ್ಕೆ ಆಗಮಿಸಿರುವುದು ಬಿಜೆಪಿ ವಲಯದಲ್ಲಿ ಹೊಸ ಹುರುಪು ತಂದಿದೆ.
ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಅಮಿತ್ ಷಾ ಬೆಳಗ್ಗೆ ನೇರವಾಗಿ ತಾವು ವಾಸ್ತವ್ಯ ಹೂಡಲಿರುವ ಚಾಲುಕ್ಯ ವೃತ್ತದಲ್ಲಿರುವ ನಿವಾಸಕ್ಕೆ ಆಗಮಿಸಿದರು.
ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್, ಅನಂತಕುಮಾರ್ ಹೆಗಡೆ ಹಾಗೂ ಆರ್. ಅಶೋಕ್ ಸೇರಿದಂತೆ ಅನೇಕ ಮುಖಂಡರ ಜೊತೆ ವಿಧಾನಸಭೆ ಚುನಾವಣೆ ಕುರಿತಂತೆ ಮಾತುಕತೆ ನಡೆಸಿದರು.
ಎರಡು ಪಟ್ಟಿಗಳ ನಂತರ ಉಂಟಾಗಿರುವ ಗೊಂದಲ, ಭಿನ್ನಮತ, ಅಸಮಾಧಾನ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ವಿರುದ್ದ ಸೆಡ್ಡು ಹೊಡೆದಿರುವ ಭಿನ್ನಮತೀಯರು ಕಾಂಗ್ರೆಸ್ ಹಾಗೂ ಜೆಡಿಎಸ್ನ ರಣತಂತ್ರ ಸೇರಿದಂತೆ ಅಭ್ಯರ್ಥಿಗಳ ಪ್ರಚಾರ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಯಾವ ಯಾವ ಭಾಗಗಳಲ್ಲಿ ಪ್ರಚಾರ ನಡೆಸಬೇಕು, ಎಷ್ಟು ಸಭೆಗಳನ್ನು ನಡೆಸಲು ಸಾಧ್ಯವಿದೆ. ಮೋದಿ ಅವರ ಜೊತೆಗೆ ಪಕ್ಷದ ಪ್ರಮುಖರೆನಿಸಿದ ಉತ್ತರ ಪ್ರದೇಶದ ಯೋಗಿ ಆದಿತ್ಯನಾತ್, ರಾಜಸ್ಥಾನದ ವಸುಂಧರ ರಾಜೆ, ಮಧ್ಯಪ್ರದೇಶದ ಶಿವರಾಜ್ಸಿಂಗ ಚವ್ಹಾಣ್, ಛತ್ತೀಸ್ಘಡದ ಡಾ.ರಮಣ್ಸಿಂಗ್, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್ ಸೇರಿದಂತೆ ಮತ್ತಿತರರು ಯಾವ ಯಾವ ದಿನದಂದು ಪ್ರಚಾರ ನಡೆಸಬೇಕು ಎಂಬುದರ ಬಗ್ಗೆಯೂ ಮಾಹಿತಿ ಪಡೆದರು.
ಬಸವೇಶ್ವರ ಪ್ರತಿಮೆಗೆ ಮಲಾರ್ಪಣೆ:
ಸ್ಥಳೀಯ ನಾಯಕರ ಜೊತೆ ಚರ್ಚೆ ಮುಗಿದ ಬಳಿಕ ಅಮಿತ್ ಷಾ ನೇರವಾಗಿ ಚಾಲುಕ್ಯ ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಅಲ್ಲಿಂದ ನೇರವಾಗಿ ವಿಜಯನಗರದಲ್ಲಿರುವ ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ಅವರ ಮನೆಗೆ ತೆರಳಿ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳು ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಿದರು.
ಡಾ. ಚಿ.ಮೂ ಭೇಟಿ ಬಳಿಕ ಅಮಿತ್ ಷಾ ಅವರು ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರನ್ನು ಭೇಟಿ ಮಾಡಿ ಪ್ರಣಾಳಿಕೆಯ ಬಗ್ಗೆ ಸಲಹೆ ಪಡೆದಿದ್ದಾರೆ. ಅಮಿತ್ ಷಾ ಅವರ ಜೊತೆಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು.
ಸಿದ್ದಲಿಂಗಯ್ಯ ಭೇಟಿ ಮುಗಿದ ಬಳಿಕ ಅರಮನೆ ಮೈದಾನದಲ್ಲಿ ನಡೆಯಲಿರುವ ಶಕ್ತಿ ಕೇಂದ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಚುನಾವಣಾ ಉಸ್ತುವಾರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.
ತದನಂತರ ಹೊಸ ಕೋಟೆಯಲ್ಲಿ ನಡೆಯಲಿರುವ ಬಿಜೆಪಿ ಅಭ್ಯರ್ಥಿ ಶರತ್ ಬಚ್ಚೇಗೌಡ ಪರ ರೋಡ್ ಶೋನಲ್ಲಿ ಪಾಲ್ಗೊಳ್ಳಲು ತೆರಳುವರು.