ಬೆಂಗಳೂರು, ಏ.18-ಬಸವ ಜಯಂತಿ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಗಣ್ಯಾತಿ ಗಣ್ಯರು ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಕ್ತಿಭಾವ ಪ್ರದರ್ಶಿಸಿದರು.
ಚಾಲುಕ್ಯ ವೃತ್ತದಲ್ಲಿರುವ ಅಶ್ವರೂಢ ಬಸವಣ್ಣನವರ ಪ್ರತಿಮೆ ಬಳಿ ಬಸವ ಜಯಂತಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ ಮತ್ತಿತರರು ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಕಾಂಗ್ರೆಸ್ ಮುಖಂಡರ ಸರದಿ ಮುಗಿದ ಬೆನ್ನಲ್ಲೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಆಗಮಿಸಿ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಅಮಿತ್ ಷಾ ಹಾಕಿದ ಹಾರ ಬಸವಣ್ಣನ ಪ್ರತಿಮೆ ಜಾರಿ ಕೆಳಗೆ ಬಿತ್ತು. ಬಿಎಸ್ವೈ ಹಾಕಿದ ಹಾರ ಕರಾರುವಕ್ಕಾಗಿತ್ತು. ತದನಂತರ ಬಸವಣ್ಣನ ಭಾವಚಿತ್ರಕ್ಕೆ ಅಮಿತ್ ಷಾ ಅವರು ಪುಷ್ಪ ನಮನ ಸಲ್ಲಿಸಿದರು.
ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಮಾಜಿ ಸಚಿವರಾದ ಆರ್.ಅಶೋಕ್, ಕಟ್ಟಾಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಬಿಜೆಪಿಯ ಹಲವಾರು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರತಿಭಟನೆಗೆ ಯತ್ನ:
ಅಮಿತ್ ಷಾ ಅವರ ಆಗಮನಕ್ಕೂ ಮುನ್ನ ಬಸವ ತತ್ವ ಅನುಯಾಯಿಗಳು ಪ್ರತಿಭಟನೆಗೆ ಮುಂದಾಗಿ ಲಿಂಗಾಯಿತ ಧರ್ಮಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಕುರಿತು ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಗೆ ತಮ್ಮ ನಿಲುವನ್ನು ಅಮಿತ್ ಷಾ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಮುಂದಾದರು.
ಕೂಡಲೇ ಪೆÇಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾನಿರತರನ್ನು ವಶಕ್ಕೆ ಪಡೆಯುವ ಮೂಲಕ ವಾತಾವರಣವನ್ನು ತಿಳಿಸಿಗೊಳಿಸಿದರು.