ನಂಜಾಮರಿ ಅವರಿಗೆ ಟಿಕೆಟ್ ಘೋಷಣೆಯಾಗಿದ್ದರೂ ಬಿ ಫಾರಂ ನೀಡುವಲ್ಲಿ ಮಾತ್ರ ವರಿಷ್ಠರ ಹಿಂದೇಟು :

ತುಮಕೂರು,ಏ.18-ತಿಪಟೂರು ಕ್ಷೇತ್ರ ಕಾಂಗ್ರೆಸ್‍ನಿಂದ ಹಾಲಿ ಶಾಸಕ ಕೆ.ಷಡಕ್ಷರಿಗೆ ಟಿಕೆಟ್ ಕೈ ತಪ್ಪಿ ನಂಜಾಮರಿ ಅವರಿಗೆ ಟಿಕೆಟ್ ಘೋಷಣೆಯಾಗಿದ್ದರೂ ಬಿ ಫಾರಂ ನೀಡುವಲ್ಲಿ ಮಾತ್ರ ವರಿಷ್ಠರುಹಿಂದೇಟು ಹಾಕುತ್ತಿದ್ದಾರೆ.
ಪ್ರಬಲ ಆಕಾಂಕ್ಷಿಯಾಗಿದ್ದ ಷಡಕ್ಷರಿ ಅವರಿಗೆ ಕೈ ಟಿಕೆಟ್ ತಪ್ಪಿದ್ದರಿಂದ ಸ್ವತಃ ಷಡಕ್ಷರಿ ಅವರು ಜಿಲ್ಲಾ ರಾಜ್ಯ ಮಟ್ಟದ ನಾಯಕರ ಮೇಲೆ ಕೆಂಡಾಮಂಡಲರಾಗಿದ್ದಲ್ಲದೆ ಇವರ ಬೆಂಬಲಿಗರು ತಿಪಟೂರು ಬಂದ್‍ಗೂ ಕರೆ ನೀಡಿದ್ದರು.
ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ನಂಜಾಮರಿ ಅವರಿಗೆ ಟಿಕೆಟ್ ದೊರೆತ ಹಿನ್ನೆಲೆಯಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿ ಫಾರಂ ನೀಡಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಸಿ.ವೇಣುಗೋಪಾಲ್ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ನಿನ್ನೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಘೋಷಿತ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗುತ್ತಿದ್ದರೂ ತಿಪಟೂರಿನಲ್ಲಿ ಮಾತ್ರ ಅಭ್ಯರ್ಥಿಯಾಗಿರುವ ನಂಜಾಮರಿಗೆ ಬಿ ಫಾರಂ ನೀಡಿಲ್ಲ.  ಈ ನಡುವೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆ.ಷಡಕ್ಷರಿ ಮತ್ತು ಬಿ.ನಂಜಾಮರಿ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಸುದೀರ್ಘವಾದ ಮಾತುಕತೆ ನಡೆಸಿದ್ದಾರೆ. ಹಾಗಾಗಿ ಅಂತಿಮವಾಗಿ ಯಾರ ಹೆಸರು ಘೋಷಣೆಯಾಗಲಿದೆ ಬಿಫಾರಂ ಇಬ್ಬರಲ್ಲಿ ಯಾರಿಗೆ ಸಿಗುತ್ತದೆ ಎಂಬುದು ಎಲ್ಲದರಲ್ಲೂ ಕುತೂಹಲ ಮೂಡಿಸಿದೆ.
ಒಟ್ಟಾರೆ ತಿಪಟೂರು ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ಇನ್ನು ಅಂತಿಮವಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ