ಬೆಂಗಳೂರು, ಏ.18-ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ನಿನ್ನೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 29 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿಯಿಂದ ಇಬ್ಬರು, ಕಾಂಗ್ರೆಸ್ನಿಂದ ಒಬ್ಬರು, ಸಿಪಿಎಂ ಹಾಗೂ ಜೆಡಿಎಸ್ನಿಂದ ತಲಾ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಯು, ಸ್ವರಾಜ್, ಬಿಜೆಸಿ, ಕೆಎಡಿ, ಎಸ್ಯುಸಿಐ, ಎನ್ಎಸಿ ಪಕ್ಷಗಳ ತಲಾ ಒಬ್ಬೊಬ್ಬ ಅಭ್ಯರ್ಥಿ ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ.
ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೂ ಚುನಾವಣಾ ಸ್ಪರ್ಧಾಕಾಂಕ್ಷಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸುತ್ತಿದ್ದಾರೆ.
ಮೊದಲ ದಿನವಾದ ನಿನ್ನೆಯೇ 16 ಮಂದಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಪಿ.ಅನಿಲ್ಕುಮಾರ್, ವಿಜಯನಗರದಿಂದ ಕೆಎಪಿ ಅಭ್ಯರ್ಥಿಯಾಗಿ ಬಿ.ಪಿ.ಬುಡಯ್ಯ, ಗೋವಿಂದರಾಜನಗರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಉಮಾಶಂಕರ್, ಶಾಂತಿನಗರದಿಂದ ಎ.ಎ.ಸಂತೋಷ್, ಕೆ.ಆರ್.ಪುರದಿಂದ ಸಿಪಿಎಂ ಅಭ್ಯರ್ಥಿಯಾಗಿ ಎಚ್.ಎನ್.ಗೋಪಾಲಗೌಡ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಮೈಸೂರು ಜಿಲ್ಲೆಯ ವರುಣಾದಿಂದ ಟಿ.ಬಸವರಾಜ್, ಸವದತ್ತಿ ಯಲ್ಲಮ್ಮದಿಂದ ವಿಶ್ವನಾಥ್ ಸಿ. ಮಾಮನಿ ಬಿಜೆಪಿ ಅಭ್ಯರ್ಥಿಯಾಗಿ, ಭಂಟ್ವಾಳದಿಂದ ಜೆಡಿಯು ಅಭ್ಯರ್ಥಿಯಾಗಿ ಬಾಲಕೃಷ್ಣ ಪೂಜಾರಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಚಿತ್ರದುರ್ಗದಿಂದ ಸಿ. ಶಿವುಯಾದವ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರೆ, ಚಳ್ಳಕೆರೆಯಿಂದ ಕೆ.ಪಿ.ಭೂತಯ್ಯ ಸ್ವರಾಜ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಸಿಪಿಎಂ ಅಭ್ಯರ್ಥಿಯಾಗಿ ಎಚ್.ಎನ್.ಗೋಪಾಲಗೌಡ ಕೆ.ಆರ್.ಪುರದಿಂದ ಹಾಗೂ ಮಲ್ಲಮ್ಮ ಅಗರಿ ಬೊಮ್ಮನಹಳ್ಳಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.
ಚಾಮುಂಡೇಶ್ವರಿಯಿಂದ ಡಾ.ಕೆ.ಪದ್ಮನಾಭನ್, ಶ್ರೀರಂಗಪಟ್ಟಣದಿಂದ ಮೋಹನ್ಕುಮಾರ್, ರಾಮನಗರದಿಂದ ಜೆ.ಮಂಜುನಾಥ್, ಮುಳಬಾಗಿಲಿನಿಂದ ಬಿ.ಮಾರಪ್ಪ, ಶಿಡ್ಲಘಟ್ಟದಿಂದ ಆಂಜನಪ್ಪ, ಬಾಗೇಪಲ್ಲಿಯಿಂದ ಎನ್.ಈಶ್ವರಪ್ಪ , ತುರುವೇಕೆರೆಯಿಂದ ಎಂ.ಡಿ.ರಮೇಶ್, ಬಳ್ಳಾರಿ ನಗರದಿಂದ ಪಿ.ನಾರಾಯಣಮೂರ್ತಿ, ಬ್ಯಾಡಗಿಯಿಂದ ರುದ್ರಯ್ಯ ಅಂದಾನಯ್ಯ ಸಾಲಿಮಠ, ಲಿಂಗಸಗೂರುನಿಂದ ಶಿವಪುತ್ರ ಛಲವಾದಿ, ಸಿಂಧಗಿಯಿಂದ ಎಂ.ಸಿ.ರೆಡ್ಡಿ ವಾಡಗಿ, ನಾಗಠಾಣದಿಂದ ಕೆ.ದೀಪಕ್ ಗಂಗಾರಾಮ್, ಬಿಜಾಪುರ ನಗರದಿಂದ ಕಲ್ಲಪ್ಪ ಆರ್.ಕಡೇಚೂರ್, ರಾಯಭಾಗದಿಂದ ಪ್ರಭಾಕರ್ ಎಚ್.ಗಗ್ಗರಿ, ಅವರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಸಂಡೂರಿನಿಂದ ಎಸ್ಯುಸಿಐ ಅಭ್ಯರ್ಥಿಯಾಗಿ ರಾಮಾಂಜನಪ್ಪ, ತೆರದಾಳ ಕ್ಷೇತ್ರದಿಂದ ಎನ್ಎಸಿ ಅಭ್ಯರ್ಥಿಯಾಗಿ ಆರ್.ವಿರೇಶ್ ಪ್ರಸಾದ್ ಹಾಗೂ ಗೌರಿಬಿದನೂರು ಕ್ಷೇತ್ರದಿಂದ ಬಿಜೆಸಿ ಅಭ್ಯರ್ಥಿಯಾಗಿ ವಿ.ಸಚ್ಚಿದಾನಂದ ಮೂರ್ತಿ ನಾಮಪತ್ರ ಸಲ್ಲಿಸಿದ್ದಾರೆ.
ಇಂದು ಬಸವ ಜಯಂತಿ ಅಂಗವಾಗಿ ಸರ್ಕಾರಿ ರಜೆ ಇರುವುದರಿಂದ ನಾಮಪತ್ರ ಸಲ್ಲಿಕೆ ಆಗಲಿಲ್ಲ. ನಾಳೆ ಗುರುವಾರವಾಗಿರುವುದರಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.