ಟಿಕೆಟ್ ವಂಚಿತರಿಂದ ಕೊನೆ ಕ್ಷಣದ ಪ್ರಯತ್ನವಾಗಿ ಪ್ರತಿಭಟನೆಯ ಮೂಲಕ ಒತ್ತಡ ತರುವ ಪ್ರಯತ್ನ

ಬೆಂಗಳೂರು, ಏ.18-ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಗೊಂಡು ಮೂರು ದಿನಗಳು ಕಳೆದರೂ ಪ್ರತಿಭಟನೆ ಕಾವು ಇನ್ನೂ ಕ್ಷೀಣಿಸಿಲ್ಲ.

ಈಗಾಗಲೇ ಘೋಷಿತ ಅಭ್ಯರ್ಥಿಗಳಲ್ಲಿ ಬಹುತೇಕರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬಿ ಫಾರಂ ವಿತರಿಸಿದ್ದಾರೆ. ಆದಾಗ್ಯೂ ಟಿಕೆಟ್ ವಂಚಿತರು ಕೊನೆ ಕ್ಷಣದ ಪ್ರಯತ್ನ ಎಂಬಂತೆ ಪ್ರತಿಭಟನೆಯ ಮೂಲಕ ಒತ್ತಡ ತರುವ ಪ್ರಯತ್ನ ಮುಂದುವರೆಸಿದ್ದಾರೆ.

ಕೆಪಿಸಿಸಿ ಕಚೇರಿಯ ಎದುರು ಇಂದೂ ಸಹ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಟಿಕೆಟ್ ವಂಚಿತ ಆಕಾಂಕ್ಷಿ ಗಿರೀಶ್ ಕೆ. ನಾಶಿ ಮತ್ತು ಹೆಬ್ಬಾಳದ ಕ್ಷೇತ್ರದ ರೆಹಮಾನ್ ಷರೀಫ್ ಪರವಾಗಿ ಅವರ ಅಪಾರ ಬೆಂಬಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇದಲ್ಲದೆ, ರಾಜ್ಯದ ಇನ್ನೂ ಕೆಲವು ಕಡೆ ಟಿಕೆಟ್ ವಂಚಿತರ ಪ್ರತಿಭಟನೆ ಮುಂದುವರೆದಿದ್ದು, ನಿನ್ನೆ ಕೂಡ ಕೆಪಿಸಿಸಿ ಕಚೇರಿ ಎದುರು ಆರ್.ಬಿ.ತಿಮ್ಮಾಪುರ್ ಅವರಿಗೆ ಮುಧೋಳದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು.

ಇಂದು ಹೆಬ್ಬಾಳ ಮತ್ತು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗಿರೀಶ್ ಕೆ.ನಾಶಿ ಹಾಗೂ ರೆಹಮಾನ್ ಷರೀಫ್‍ಗೆ ಟಿಕೆಟ್ ನೀಡಲು ಒತ್ತಾಯಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಿನ್ನೆಯಿಂದಲೇ ಆರಂಭಗೊಂಡಿದ್ದು, ಅದಕ್ಕೆ ಪೂರ್ವತಯಾರಿಯಾಗಿ ಟಿಕೆಟ್ ಪಡೆದವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದಡೆ ಟಿಕೆಟ್ ವಂಚಿತರು ಪ್ರತಿಭಟನೆ ಮಾಡಿ ತಮ್ಮ ಅಸಮಾಧಾನ ಹೊರಹಾಕುವ ಮೂಲಕ ಬಂಡಾಯದ ಮುನ್ನೆಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿ ಎದುರು ಎರಡೂ ಕ್ಷೇತ್ರಗಳ ಆಕಾಂಕ್ಷಿಗಳ ಪರವಾಗಿ ಪ್ರತಿಭಟನೆ ನಡೆದು ನೂರಾರು ಜನ ಜಮಾಯಿಸಿದ್ದರಿಂದ ಸಂಚಾರಕ್ಕೆ ಅಡಚಣೆಯಾಯಿತಲ್ಲದೆ, ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೆÇಲೀಸರು ಹರಸಾಹಸ ಪಡುವಂತಾಯಿತು.

ಕಾರ್ಯಕರ್ತರು ಕ್ವೀನ್ಸ್ ರಸ್ತೆ ಮಧ್ಯದಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ಕ್ವೀನ್ಸ್ ರಸ್ತೆಯ ಸುತ್ತಮುತ್ತಲ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿ ಸಂಚಾರ ದಟ್ಟಣೆ ಎದುರಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ