ಮೈಸೂರು, ಏ.11- ಜಿದ್ದಾಜಿದ್ದಿನ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏ.20ರಂದು ನಾಮಪತ್ರ ಸಲ್ಲಿಸುತ್ತಿದ್ದಾರೆ.
ವಿಶೇಷವೆಂದರೆ ಅದೇ ದಿನವೇ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡರು ಸಹಾ ತಮ್ಮ ಉಮೇದುವಾರಿಕೆ ಸಲ್ಲಿಸುವರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿ.ಟಿ. ದೇವೇಗೌಡ ತಾಲೂಕು ಕಚೇರಿಗೆ ಅವರವರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.
ನಗರದ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್ ಕೂಡಾ ಏ.20ರಂದೇ ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವರು.
ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ನಾಳೆ (ಏ.19) ನಾಮಪತ್ರ ಸಲ್ಲಿಸಲಿದ್ದಾರೆ.
ಹುಣಸೂರಿನ ಶ್ರೀ ಆಂಜನೇಯ ಹಾಗೂ ಶಿರಡಿ ಸಾಯಿಬಾಬಾ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ನಿನ್ನೆ ಪಕ್ಷೇತರ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ತಮಿಳುನಾಡು ರಾಜ್ಯದ ಪದ್ಮನಾಭ ರಾಜನ್ ಎಂಬುವರು ನಾಮಪತ್ರ ಸಲ್ಲಿಸಿದರು. ಇವರು ರಾಷ್ಟ್ರಪತಿ ಚುನಾವಣೆಗೆ ಐದು ಬಾರಿ, ನಾಲ್ವರು ಪ್ರಧಾನಮಂತ್ರಿ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದರು. ಅಲ್ಲದೆ 12 ಮುಖ್ಯಮಂತ್ರಿಗಳಾಗಿರುವವರ ವಿರುದ್ಧವೂ ಸ್ಪರ್ಧಿಸಿ ದಾಖಲೆ ಮಾಡಿದ್ದಾರೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದರಿಂದ ಅವರ ವಿರುದ್ಧ ಪದ್ಮನಾಭರಾಜನ್ ನಾಮಪತ್ರ ಸಲ್ಲಿಸಿದ್ದಾರೆ.