ಬೆಂಗಳೂರು, ಏ.17- ರಾಜ್ಯದಲ್ಲಿ ವಿವಿಧ ರೀತಿಯ ಕೋಮುಗಲಭೆಗಳನ್ನು ಹೆಚ್ಚಿಸುತ್ತಿರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರದಂತೆ ತಡೆಯಬೇಕೆಂದು ರಾಜ್ಯದ ಮಾದಿಗರು ಮತ್ತು ಇದರ ಉಪಜಾತಿ ಸಮುದಾಯಗಳಲ್ಲಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ವಿರೋಧಿ ಮತಂಧ, ಧರ್ಮಾಂದ, ಜಾತಿವಾದಿ, ಬಿಜೆಪಿ ಪಕ್ಷವನ್ನು ತಿರಸ್ಕರಿಸಬೇಕು. ಮುಂಬರುವ ವಿಧಾನಸಭಾ ಚುನಾವಣೆ, ಲೋಕಸಭೆ ಚುನಾವಣೆಯಲ್ಲೂ ಅಧಿಕಾರ ವಹಿಸದಂತೆ ಎಚ್ಚರಿಕೆಯಿಂದ ಇರಬೇಕು ಎಂದರು.
ಬಿಜೆಪಿ ಸರ್ಕಾರವು ಜಾತಿವಾದಿ ನಿಲುವನ್ನು ಹೊಂದಿರುವ ಸನಾತನ ಮನು ಧರ್ಮಶಾಸ್ತ್ರದ ಆಧಾರದ ಮೇಲೆ ಆಡಳಿತ ನಡೆಸಬೇಕೆಂಬ ಸಿದ್ಧಾಂತ ಹೊಂದಿದೆ. ಇವರು ಮೀಸಲಾತಿ ವಿರೋಧಿಯಾಗಿದ್ದು, ಹಾಗಾಗಿಯೇ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಬದಲಾಯಿಸಲು ಎಲ್ಲ ದಲಿತ ಮತ್ತು ಮಾದಿಗ ಸಮುದಾಯದವರು ಬಿಜೆಪಿ ಸರ್ಕಾರವನ್ನು ಬೆಂಬಲಿಸಬಾರದೆಂದು ಮನವಿ ಮಾಡಿದರು.
ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸುವುದಕ್ಕೆ ಕೈ ಹಾಕಿದ್ದಾರೆ. ಅದು ಅಲ್ಲದೆ, ಬಿಜೆಪಿ ಸರ್ಕಾರವು ದಲಿತರ ಆಹಾರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ. ಅಂಬೇಡ್ಕರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿಯುವ ಮೂಲಕ ಸಂವಿಧಾನ ಬದಲಾಯಿಸಲು ಮುಂದಾಗಿದ್ದಾರೆ. ಇಂತಹ ಸರ್ಕಾರಕ್ಕೆ ಬೆಂಬಲ ನೀಡಬಾರದೆಂದು ಈ ಮೂಲಕ ಒತ್ತಾಯಿಸಿದರು.