ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರಿಂದ ವಿವಿಧ ಕ್ಷೇತ್ರಗಳ ಗಣ್ಯರ ಭೇಟಿ: ಚುನಾವಣೆಯ ಪ್ರಣಾಳಿಕೆ ಸಂಬಂಧ ಸಲಹೆ

ಬೆಂಗಳೂರು, ಏ.17- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಳೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಭೇಟಿ ಮಾಡಿ ವಿಧಾನಸಭೆ ಚುನಾವಣೆಯ ಪ್ರಣಾಳಿಕೆ ಸಂಬಂಧ ಸಲಹೆ ಪಡೆಯಲಿದ್ದಾರೆ.

ಹಿರಿಯ ಸಂಶೋಧಕ ಚಿದಾನಂದಮೂರ್ತಿ, ದಲಿತ ಸಾಹಿತಿ ಡಾ.ಸಿದ್ಧಲಿಂಗಯ್ಯ ಸೇರಿದಂತೆ ರಾಜ್ಯದ ಪ್ರತಿಷ್ಠಿತ ಕೈಗಾರಿಕೋದ್ಯಮಿಗಳು, ಮತ್ತಿತರರನ್ನು ಭೇಟಿ ಮಾಡಿ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಪ್ರಮುಖ ಅಂಶಗಳ ಬಗ್ಗೆ ಮಾರ್ಗದರ್ಶನ ಪಡೆಯುವರು.

ನಾಳೆ ಬೆಳಗ್ಗೆ ಮೊದಲಿಗೆ ಚಿದಾನಂದಮೂರ್ತಿ ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಚರ್ಚಿಸಲಿದ್ದು, ನಂತರ ಡಾ.ಸಿದ್ದಲಿಂಗಯ್ಯ ಅವರನ್ನು ಭೇಟಿ ಮಾಡುವರು. ಅಲ್ಲಿಯೇ ಉಪಹಾರ ಸೇವಿಸಿ ಅಲ್ಲಿಂದ ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಿ ಚರ್ಚಿಸಿ ಸಲಹೆ ಪಡೆಯುವರು.

ಈಗಾಗಲೇ ಶಾಸಕ ಸುರೇಶ್‍ಕುಮಾರ್ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿ ರಚಿಸಲಾಗಿದ್ದು, ನಾಡಿನ ಗಣ್ಯರು, ಸಾಹಿತಿಗಳು, ಕೈಗಾರಿಕೋದ್ಯಮಿಗಳ ಭೇಟಿ ನಂತರ ಸಂಗ್ರಹಿಸುವ ಮಾಹಿತಿ ಆಧರಿಸಿ ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು.

ಟಿಕೆಟ್ ಹಂಚಿಕೆ ಪ್ರಕ್ರಿಯೆ ಒಂದು ಹಂತದಲ್ಲಿ ಪೂರ್ಣಗೊಳ್ಳುತ್ತಿದ್ದಂತೆ ಪ್ರಚಾರ ಕಾರ್ಯ ಬಿರುಸುಗೊಂಡಿದ್ದು, ಪ್ರಣಾಳಿಕೆ ರಚಿಸಿ ಪ್ರಣಾಳಿಕೆಯಲ್ಲಿನ ಭರವಸೆಗಳ ಮೂಲಕ ಮತದಾರರನ್ನು ಸೆಳೆಯಲು ಬಿಜೆಪಿ ಸಜ್ಜಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ