ಬೆಂಗಳೂರು,ಏ.17- ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ವಾಹನ ಚಾಲಕರ ಅಗತ್ಯ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ಗಂಡಸಿ ಸದಾನಂದ ಸ್ವಾಮಿ ತಿಳಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮತಯಂತ್ರ ರವಾನೆ ಮಾಡಲು ಹಾಗೂ ಮತಗಟ್ಟೆಗೆ ಸಿಬ್ಬಂದಿಗಳನ್ನು ಕರೆದೊಯ್ಯಲು 8 ರಿಂದ 10 ಸಾವಿರ ಬಸ್ಗಳನ್ನು, 1500ಕ್ಕೂ ಹೆಚ್ಚು ಸಂಚಾರಿ ದಳ, 1300 ಕಣ್ಗಾವಲು ತಂಡಗಳ ವೀಕ್ಷಣಾಲಯಗಳು ಮತ್ತು ಸಿಆರ್ಪಿಫ್ ತುಕಡಿ, ಚುನಾವಣಾಧಿಕಾರಿಗಳನ್ನು ಕರೆದೊಯ್ಯಲು ಸುಮಾರು 80 ಸಾವಿರಕ್ಕೂ ಹೆಚ್ಚು ವಾಹನಗಳು ಹಾಗೂ ಚಾಲಕರು ಕಾರ್ಯ ನಿರ್ವಹಿಸುತ್ತಾರೆ. ಹಾಗಾಗಿ ವಾಹನ ಚಾಲಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ನೀರು, ಊಟೋಪಚಾರ, ಭದ್ರತಾ ವ್ಯವಸ್ಥೆ, ಭತ್ಯೆ, ಹಾಗೂ ವಿಶ್ರಾಂತಿ ಕೊಠಡಿಗಳನ್ನು ಸಮರ್ಪಕ ರೀತಿಯಲ್ಲಿ ಒದಗಿಸಿಕೊಡಲು ಮನವಿ ಮಾಡಲಾಗಿದೆ ಎಂದರು.
ಬಾಡಿಗೆ ರೂಪದಲ್ಲಿ ಬರುವ ಹಳದಿ ಬೋರ್ಡ್ ವಾಹನಗಳಿಗೆ ತೈಲಬೆಲೆ ಹೆಚ್ಚಾಗಿರುವುದರಿಂದ ಪ್ರತೀ ಕಿ.ಮೀ. ಮೀಟರ್ಗೆ ನೀಡುವ ದರವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಚುನಾವಣೆಯಲ್ಲಿಚಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ಚಾಲಕರು ತಮ್ಮ ವಾಹನಗಳಲ್ಲಿ ಬರುವವರಿಗೆ ಮತದಾನದ ಬಗ್ಗೆ ಅರಿವು ಮೂಡಿಸುತ್ತಾರೆ. ಮತ್ತು ವಾಹನಗಳಲ್ಲಿ ಹಣ ಮತ್ತಿತರೆ ವಸ್ತುಗಳನ್ನು ಸಾಗಿಸುವ ಸಂಗತಿ ಗಮನಕ್ಕೆ ಬಂದಲ್ಲಿ ಅದನ್ನು ಸಂಬಂಧಿಸಿದ ಚುನಾವಣಾ ಕಣ್ಗಾವಲು ಸಮಿತಿಯ ಗಮನಕ್ಕೆ ತರುತ್ತದೆ. ಅಲ್ಲದೆ ರಾಜ್ಯಾದ್ಯಂತ ಸುಮಾರು 30 ಜಿಲ್ಲೆಗಳ್ಲಲಿ ಚಾಲಕರ ಒಕ್ಕೂಟದ ವತಿಯಿಂದ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಲಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತೀ ಸಂಘ ಸಂಸ್ಥೆ ಪಾತ್ರ ಬಹುಮುಖ್ಯವಾಗಿದೆ. ಅದೇ ರೀತಿ ಚಾಲಕರು ಸಹ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.