ಶಾಸಕ ಶಿವಣ್ಣ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಹಿನ್ನಲೆ: ಕಾಂಗ್ರೆಸ್‍ನ ಬಲಾಢ್ಯ ಅಭ್ಯರ್ಥಿಗಳಲ್ಲಿ ಗಲಿಬಿಲಿ

ಬೆಂಗಳೂರು,ಏ.17-ಆನೇಕಲ್ ಶಾಸಕ ಶಿವಣ್ಣ ಅವರ ಮನೆ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ನಂತರ ಚುನಾವಣಾ ಕಣದಲ್ಲಿರುವ ಕಾಂಗ್ರೆಸ್‍ನ ಬಲಾಢ್ಯ ಅಭ್ಯರ್ಥಿಗಳಲ್ಲಿ ಗಲಿಬಿಲಿಯ ವಾತಾವರಣ ನಿರ್ಮಾಣವಾಗಿದ್ದು, ಮುಕ್ತ ಚುನಾವಣೆಗೆ ಹಿಂದೇಟು ಹಾಕುವಂತಾಗಿದೆ.

ಚುನಾವಣೆ ಹೊಸ್ತಿಲಲ್ಲೇ ಆದಾಯ ತೆರಿಗೆ ಅಧಿಕಾರಿಗಳು ಆನೇಕಲ್ ಶಾಸಕ ಹಾಗೂ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಪ್ತರಾದ ಬಿ.ಶಿವಣ್ಣ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಅದೇ ರೀತಿ ಕಾಂಗ್ರೆಸ್‍ನ ಕೆಲವು ಶಾಸಕರು ಹಾಗೂ ಬಲಾಢ್ಯ ಅಭ್ಯರ್ಥಿಗಳು ಆದಾಯ ತೆರಿಗೆ ದಾಳಿ ಭೀತಿಯಿಂದ ಬಳಲುತ್ತಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದು, ಕಾಂಗ್ರೆಸ್ ಮುನ್ನುಗ್ಗುತ್ತಿರುವ ವೇಳೆಯೇ ಆದಾಯ ತೆರಿಗೆ ಗುಮ್ಮ ಅಭ್ಯರ್ಥಿಗಳನ್ನು ಕಂಗಾಲಾಗುವಂತೆ ಮಾಡಿದೆ.

ಈಗಾಗಲೇ ಬೊಮ್ಮನಹಳ್ಳಿ ಕ್ಷೇತ್ರದಿಂದ ಟಿಕೆಟ್ ಘೋಷಣೆಯಾಗಿರುವ ಸುಷ್ಮರಾಜ್ ಗೋಪಾಲರೆಡ್ಡಿ ಮತ್ತು ಮಲ್ಲೇಶ್ವರಂ ಕ್ಷೇತ್ರದ ಎಂ.ಆರ್.ಸೀತಾರಾಂ ಅವರು ಸ್ಪರ್ಧಿಸಲು ಹಿಂದೆ-ಮುಂದೆ ನೋಡುತ್ತಿದ್ದಾರೆ ಎನ್ನಲಾಗಿದೆ.

ಕೇಂದ್ರ ಚುನಾವಣಾ ಆಯೋಗ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 28 ಲಕ್ಷ ರೂ. ಖರ್ಚು ನಿಗದಿಪಡಿಸಿದೆ. ಆದರೆ ಯಾವ ಅಭ್ಯರ್ಥಿ ಅಷ್ಟೇ ವೆಚ್ಚದಲ್ಲಿ ಚುನಾವಣೆ ಪೂರ್ಣಗೊಳಿಸುವುದಿಲ್ಲ ಎಂಬುದು ವಾಸ್ತವಾಂಶ.

ಚುನಾವಣೆ ಕಾಲದಲ್ಲಿ ಅನಧಿಕೃತ ಹಣ ಬಳಕೆ ಸಾಮಾನ್ಯವಾಗಿದೆ. ಹಾಗಾಗಿ ಅಭ್ಯರ್ಥಿಗಳ ಮೇಲೆ ಕಣ್ಣಿಡಲು ಸುಮಾರು 250ಕ್ಕೂ ಹೆಚ್ಚು ಮಂದಿ ಐಎಎಸ್ ಅಧಿಕಾರಿಗಳು ಉತ್ತರ ಭಾರತದಿಂದ ಬಂದು ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಅದರಲ್ಲಿ ಬೆಂಗಳೂರಿನಲ್ಲಿ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಿ ಹೆಜ್ಜೆ ಹೆಜ್ಜೆಗೂ ತಪಾಸಣೆ ಮಾಡಲಾಗುತ್ತಿದೆ.

ಚುನಾವಣಾ ಆಯೋಗ ನಿಷ್ಪಕ್ಷಪಾತ ಮತ್ತು ಮುಕ್ತ ಚುನಾವಣೆ ಬಗ್ಗೆ ಕ್ರಮ ಕೈಗೊಂಡಿದ್ದು, ಇದು ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೂ ನುಂಗಲಾರದ ಬಿಸಿ ತುಪ್ಪವಾಗಿದೆ. ಈ ನಡುವೆ ಆದಾಯ ತೆರಿಗೆ ದಾಳಿ ಅಭ್ಯರ್ಥಿಗಳನ್ನು ಭಯ ಬೀಳಿಸಿದೆ.

ಚುನಾವಣಾ ಪ್ರಚಾರದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಬ್ಯುಸಿಯಾಗಿದ್ದು, ಯಾರು ಯಾರ ಕೈಗೂ ಸಿಗದ ವಾತಾವರಣವಿದೆ. ಹೀಗಾಗಿ ಬಹುತೇಕ ಅಭ್ಯರ್ಥಿಗಳು ನಮ್ಮ ಮನೆ ಮೇಲೆ ಯಾವಾಗ ದಾಳಿ ನಡೆಯಲಿದೆಯೋ ಎಂಬ ಭಯದಿಂದ ಕಂಗಾಲಾಗಿದ್ದಾರೆ. ಒಂದು ವೇಳೆ ದಾಳಿ ನಡೆದರೆ ನಮ್ಮ ರಕ್ಷಣೆಗೆ ಬರುವವರಾರು ಎಂಬ ಚಿಂತೆ ಕಾಡಲಾರಂಭಿಸಿದೆ.

ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಹಿಂದೇಟಿಗೆ ಕಾರಣವಾಗಿದೆ. ಚುನಾವಣೆ ಕಾಲದಲ್ಲಿ ಒಂದೆಡೆ ಮತದಾರರ ಮತವೊಲಿಕೆ ಕಸರತ್ತು ನಡೆಯುತ್ತಿದ್ದರೆ, ಮತ್ತೊಂದೆಡೆ ಖರ್ಚು ವೆಚ್ಚ ನಿಭಾಯಿಸಲು ತಲೆನೋವಿನಿಂದ ಬಹಳಷ್ಟು ಮಂದಿ ಹೈರಾಣಾಗಿದ್ದಾರೆ.

ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಪ್ರತಿ ಪೈಸೆ ಖರ್ಚನ್ನು ಆಯೋಗ ಕಟ್ಟುನಿಟ್ಟಾಗಿ ನಿಗಾವಹಿಸುತ್ತಿರುತ್ತದೆ. ತಪಾಸಣೆ ವೇಳೆ 10 ಲಕ್ಷ ಕ್ಕಿಂತ ಹೆಚ್ಚು ಹಣ ಸಿಕ್ಕರೆ ಅ ಪ್ರಕರಣ ನೇರವಾಗಿ ಆದಾಯ ತೆರಿಗೆ ವಿಚಾರಣೆಗೆ ಒಳಪಡುತ್ತದೆ. ಹೀಗಾಗಿ ಈ ಬಾರಿಯೂ ಚುನಾವಣೆ ಅಭ್ಯರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದೆ.
ಜನರ ಮನವೊಲಿಕೆವೊಂದೇ ಪ್ರಮುಖ ದಾರಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ