ಬೆಂಗಳೂರು, ಏ.17- ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ದಿನ ನೀರಸವಾಗಿತ್ತು.
ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆನಂದ ಮಹಾಮನಿ ನಾಮಪತ್ರ ಸಲ್ಲಿಸಿದ್ದಾರೆ.
ಉಳಿದಂತೆ ರಾಜ್ಯದ ವಿವಿಧೆಡೆ ಕೆಲ ಪಕ್ಷೇತರರು ಕೂಡ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದು, ಇನ್ನೂ ಏ.24ರ ವರೆಗೆ ಕಾಲಾವಕಾಶವಿರುವುದರಿಂದ 19ರ ನಂತರ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ನಾಳೆ ಬಸವ ಜಯಂತಿ ಪ್ರಯುಕ್ತ ರಜೆ ಇರಲಿದೆ. ಇಂದಿನಿಂದಲೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನ ನಾಯಕರು ಅಭ್ಯರ್ಥಿಗಳಿಗೆ ಬಿ ಫಾರಂ ನೀಡುತ್ತಿದ್ದಾರೆ.
ಪ್ರಸ್ತುತ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಜತೆ ಚರ-ಚಿರ ಹಾಗೂ ಕುಟುಂಬ ಸದಸ್ಯರ ಸಂಪೂರ್ಣ ಆಸ್ತಿ ವಿವರ ಮತ್ತು ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಚುನಾವಣಾ ಆಯೋಗ ಕೇಳಿದೆ.
ಇದೆಲ್ಲವನ್ನೂ ಹೊಂದಿಸಿಕೊಳ್ಳಲು ಅಭ್ಯರ್ಥಿಗಳು ಕೂಡ ಸಮಯ ತೆಗೆದುಕೊಳ್ಳುವುದರಿಂದ ಮೊದಲ ದಿನ ಪ್ರಕ್ರಿಯೆ ಸ್ವಲ್ಪ ನೀರಸವಾಗಿತ್ತು.