ಬಿಜೆಪಿ ಶಾಸಕರು ಮತ್ತು ಸಚಿವರು ಭ್ರಷ್ಟಾಚಾರ-ಹಗರಣಗಳಲ್ಲಿ ಭಾಗಿ ಹಿನ್ನಲೆ : ಚುನಾವಣೆಯಲ್ಲಿ ಜನರು ತಿರಸ್ಕರಿಸುವಂತೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ತ್ರಿಪಾಠಿ ಒತ್ತಾಯ

ಬೆಂಗಳೂರು, ಏ.17- ಬಿಜೆಪಿಯ ಕೆಲವು ಶಾಸಕರು ಮತ್ತು ಸಚಿವರು ಭ್ರಷ್ಟಾಚಾರ ಹಾಗೂ ಹಲವು ಹಗರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಚುನಾವಣೆಯಲ್ಲಿ ಜನರು ತಿರಸ್ಕರಿಸಬೇಕೆಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ತ್ರಿಪಾಠಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಿಂದ ಪ್ರಧಾನಿಯಾಗಿರುವ ಮೋದಿ ಅವರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಿರುವ ಆರೋಪವನ್ನು ಹಲವು ಬಿಜೆಪಿ ಮುಖಂಡರು ಹೊತ್ತಿದ್ದಾರೆ. ಹಾಗಾಗಿ ಆ ಪಕ್ಷವನ್ನು ಜನತಾ ಪಕ್ಷಕ್ಕೆ ಪರ್ಯಾಯವಾಗಿ ಬಲಾತ್ಕಾರಿ ಪಕ್ಷ ಎಂದು ಕರೆಯುವುದು ಸೂಕ್ತ ಎಂದು ದೂರಿದರು.

ದೆಹಲಿಯಲ್ಲಿ ಮಾಜಿ ಶಾಸಕರೊಬ್ಬರನ್ನು ಅತ್ಯಾಚಾರ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಗುಜರಾತ್‍ನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಮುಖಂಡರೊಬ್ಬರು ಪ್ರಮುಖ ಆರೋಪಿಯಾಗಿದ್ದಾರೆ. ಬಿಜೆಪಿಯ ಇಬ್ಬರು ಎಂಎಲ್‍ಎಗಳ ವಿರುದ್ದ ಅತ್ಯಾಚಾರ ಪ್ರಕರಣ ನ್ಯಾಯಾಲಯದಲ್ಲಿದ್ದು, ವಿಚಾರಣೆ ಹಂತದಲ್ಲಿದೆ.

ಕರ್ನಾಟಕದಲ್ಲೂ ಸಹ ಬಿಜೆಪಿ ಮಾಜಿ ಸಚಿವರೊಬ್ಬರ ಮೇಲೆ ಇಂತಹ ಪ್ರಕರಣವಿದೆ. ಒಟ್ಟು 21 ಬಿಜೆಪಿ ಪ್ರಮುಖ ನಾಯಕರು ಹಲವಾರು ಹಗರಣ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಆದ್ದರಿಂದ ಮತದಾರರು ಬಿಜೆಪಿಯನ್ನು ಚುನಾವಣೆಯಲ್ಲಿ ಬಹಿಷ್ಕರಿಸಬೇಕೆಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ