ಹಾಸನ,ಏ.17
ಜಿಲ್ಲಾಧಿಕಾರಿ ಹುದ್ದೆಯಿಂದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರದ ಆದೇಶವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ(ಸಿಎಟಿ) ಎತ್ತಿ ಹಿಡಿದಿದೆ. ಆ ಮೂಲಕ ರೋಹಿಣಿ ಸಿಂಧೂರಿಗೆ ಹಿನ್ನಡೆಯಾಗಿದೆ.
ಮಂಗಳವಾರ ವಿಚಾರಣೆ ನಡೆಸಿದ ಕೇಂದ್ರಿಯ ಆಡಳಿತಾತ್ಮಕ ನ್ಯಾಯಾಧಿಕರಣ, ವರ್ಗಾವಣೆ ಪ್ರಶ್ನಿಸಿದ್ದ ರೋಹಿಣಿ ಸಿಂಧೂರಿ ಅವರ ಅರ್ಜಿ ವಜಾಗೊಳಿಸಿದೆ.
ಮೈಸೂರು ಡಿಸಿ ರಂದೀಪ್ ಹಾಸನ ಡಿಸಿಯಾಗಿ ಕೂಡಲೇ ಅಧಿಕಾರ ವಹಿಸಿಕೊಳ್ಳುವಂತೆ ಸೂಚನೆ ನೀಡಿದೆ. ಇನ್ನು ರೋಹಿಣಿ ಈ ಹಿಂದೆ ವರ್ಗಾವಣೆ ಆಗಿದ್ದ ಸ್ಥಳಕ್ಕೆ ತೆರಳುವಂತೆ ಸಿಎಟಿ ಸೂಚಿಸಿದೆ.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ರಾಜ್ಯ ಸರ್ಕಾರದ ಪರ ವಾದ ಮಂಡನೆ ಮಾಡಿದ್ದು ರಾಜ್ಯ ಸರ್ಕಾರ ಕಾನೂನುಬದ್ದವಾಗಿ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿಗಳ ಪರ ವಾದ ಮಂಡಿಸಿದ್ದ ವಕೀಲರಾದ ಸುಬ್ರಹ್ಮಣ್ಯ ಜೋಯಿಸ್ ರೋಹಿಣಿ ಅವರ ವರ್ಗಾವಣೆ ಹಿಂದೆ ಸರ್ಕಾರ ಕುತಂತ್ರ ನಡೆಸಿದೆ. ಇದು ಉದ್ದೇಶಪೂರ್ವಕ ವರ್ಗಾವಣೆ ಆಗಿದೆ” ಎಂಬ ವಾದವನ್ನು ನ್ಯಾಯಮಂಡಳಿ ಮಾನ್ಯ ಮಾಡಲಿಲ್ಲ.
ಹೈಕೋರ್ಟ್ ಗೆ ಮೊರೆ
ಸಿಎಟಿಯಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ. ಆದೇಶದ ಪ್ರತಿ ಕೈಸೇರಿದೊಡನೆ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗುತ್ತದೆ. ಏ.19ರಂದು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇವೆ ಎಂದು ರೋಹಿಣಿ ಪರ ವಕೀಲರಾದ ಸುಬ್ರಹ್ಮಣ್ಯ ಜೋಯಿಸ್ ಹೇಳಿದ್ದಾರೆ.