ಬೆಂಗಳೂರು,ಏ.16-ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಪಕ್ಷವನ್ನ್ನು ಬೆಂಬಲಿಸಿ ಎಂಬ ಹೇಳಿಕೆಗೆ ಈಗಲೂ ನಾನು ಬದ್ಧವಾಗಿದ್ದೇನೆ ಎಂದು ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅನೇಕ ಪಕ್ಷಗಳು ಸ್ಪರ್ಧಿಸಿದ್ದರೂ, ಪ್ರಸ್ತುತದಲ್ಲಿ ಮೂರು ಪಕ್ಷಗಳು ಓಟದಲ್ಲಿವೆ.
ಬಿಜೆಪಿಯಲ್ಲಿ ಲಿಂಗಾಯಿತರ ನೇತಾರರ ಸಂಖ್ಯೆ ಬಹಳವಿದ್ದರೂ ದೀರ್ಘ ಕಾಲ ಅವರು ಮೌನ ತಾಳಿದರು. ಬಿಜೆಪಿ ನಿಲುವು ಕುರಿತು ಮೊದಲೇ ಬೇಸರಗೊಂಡಿದ್ದ ಲಿಂಗಾಯಿತರು ಪ್ರಚಾರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಘಾತಕಾರಿ ಹೇಳಿಕೆಯಿಂದ ಲಿಂಗಾಯಿತರು ಬಿಜೆಪಿಯಿಂದ ದೂರ ಸರಿಯುವಂತಾಯಿತು. ಆದ್ದರಿಂದ ಕಾಂಗ್ರೆಸ್ನ್ನು ಬೆಂಬಲಿಸುತ್ತೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯನವರು ಮೂಢನಂಬಿಕೆ ವಿರೋಧದ ಮಸೂದೆಯನ್ನು ತಂದಿದ್ದರಷ್ಟೇ ಅಲ್ಲದೆ ಗುರು ಬಸವಣ್ಣನವರ ಭಾವಚಿತ್ರ ಎಲ್ಲಾ ಸರ್ಕಾರಿ ಕಾರ್ಯಾಲಯಗಳಲ್ಲಿ ಇರಬೇಕು ಎಂದು ಆದೇಶ ಹೊರಡಿಸಿದ್ದಾರೆ. ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರನ್ನು ಇಟ್ಟಿದ್ದಾರೆ. ಆದ್ದರಿಂದ ಲಿಂಗಾಯಿತರು ಪ್ರಜ್ಞಾವಂತಿಕೆಯಿಂದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ನಾನು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕರೆ ನೀಡಿದ್ದರಿಂದ ಕೆಲವರು ಕೋಪಗೊಂಡು ತನ್ನ ಹೇಳಿಕೆಯನ್ನು ವಾಪಸ್ ಹಿಂಪಡೆಯಬೇಕೆಂದು ಎಚ್ಚರಿಸಿದ್ದಾರೆ. ಅಲ್ಲದೆ ಜಾಗತಿಕ ಲಿಂಗಾಯಿತ ಮಹಾಸಭಾದ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ ಎಂದು ಹೇಳಿದರು.






