ಮಾಸ್ಕೊ, ಏ.15-ಸಿರಿಯಾ ಮೇಲೆ ಅಮೆರಿಕ ನೇತೃತ್ವದ ಪಡೆಗಳು ಕ್ಷಿಪಣಿ ದಾಳಿ ನಡೆಸಿರುವುದರಿಂದ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಇದೇ ವೇಳೆ ತೃತೀಯ ಮಹಾ ಸಂಗ್ರಾಮಕ್ಕಾಗಿ ರಷ್ಯನ್ನರು ಸಿದ್ಧವಾಗಬೇಕೆಂದು ಸರ್ಕಾರಿ ಒಡೆತನದ ಟಿವಿ ಚಾನೆಲ್ಗಳು ಕರೆ ನೀಡಿದೆ.
ಕ್ರೆಮ್ಲಿನ್ ಮಾಲಿಕತ್ವದ ರೊಸ್ಸಿಯಾ-24 ಚಾನೆಲ್ ಈಗಾಗಲೇ ರಷ್ಯನ್ನರಿಗೆ ಯುದ್ಧಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಲಹೆ ಮಾಡಿದೆ. ಅಮೆರಿಕ ಮತ್ತು ಅದರ ಮಿತ್ರಪಡೆಗಳು ರಾಜಧಾನಿ ಮಾಸ್ಕೋ ಸೇರಿದಂತೆ ವಿವಿಧ ನಗರಗಳ ಮೇಲೆ ದಾಳಿ ನಡೆಸಿದರೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವಾರ್ತಾವಾಹಿನಿ ಸಲಹೆಗಳನ್ನೂ ನೀಡಿದೆ.
ಮೂರನೆ ವಿಶ್ವ ಯುದ್ಧ ಯಾವುದೇ ಕ್ಷಣದಲ್ಲಿ ನಡೆಯುವ ಸಾಧ್ಯತೆ ಇದೆ ಅದಕ್ಕಾಗಿ ಜನರು ಸಕಲ ರೀತಿಯಲ್ಲಿಯೂ ಸಜ್ಜಾಗಬೇಕು. ಸಮರ ಸದೃಶ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ರಕ್ಷಣೆ ಮತ್ತು ಬದುಕುಳಿಯುವುದಕ್ಕಾಗಿ ನಾಗರಿಕರು ಈಗಿನಿಂದಲೇ ಅಗತ್ಯ ವಸ್ತುಗಳನ್ನು ಸಂಗ್ರಹಿಸಬೇಕು. ಬಾಂಬ್ ಪ್ರತಿರೋಧಕ ಆಶ್ರಯ ತಾಣದಲ್ಲಿ ರಕ್ಷಣೆ ಪಡೆಯಲು ವಿಕಿರಣದಿಂದ ಪಾರಾಗಲು ಅಯೋಡಿನ್ ಪ್ಯಾಕ್ಗಳೊಂದಿಗೆ ಸಜ್ಜಾಗಬೇಕು ಎಂಬಿತ್ಯಾದಿ ಸಲಹೆಗಳನ್ನು ನೀಡಲಾಗಿದೆ.
ಮಾಸ್ಕೋದಲ್ಲಿರುವ ರೈನ್ ಟಿವಿ ಸಹ ಇದೇ ರೀತಿಯ ಸಂದೇಶವನ್ನು ರಷ್ಯನ್ನರಿಗೆ ನೀಡಿದೆ. ಕಳೆದ ವರ್ಷ ರಷ್ಯಾದಲ್ಲಿ ಅಂತರ್ಯುದ್ಧ ನಡೆಯುತ್ತದೆ ಎಂದು ನಮ್ಮ ಟಿವಿ ಚಾನೆಲ್ ವರದಿ ಮಾಡಿತ್ತು. ಆದರೆ ಆ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಈಗ ಯುದ್ಧ ಸದೃಶ ಪರಿಸ್ಥಿತಿ ನಿರ್ಮಾಣವಾಗುವ ಕಾಲ ಸನ್ನಿಹಿತವಾಗಿದೆ ಅದಕ್ಕಾಗಿ ನಾವೆಲ್ಲರೂ ಸಜ್ಜಾಗಬೇಕು ಎಂದು ವಾರ್ತಾ ವಾಚಕ ಅಲೆಗ್ಸಾಂಡರ್ ಗೊಲ್ಟ್ಸ್ ಹೇಳಿದ್ದಾರೆ.