ಅಜ್ಮೀರ್, ಏ.15-ಸಾಧನೆ ಮತ್ತು ಸಮರ್ಥ ಕಾರ್ಯನಿರ್ವಹಣೆಗೆ ಅಂಧತ್ವ ಅಡ್ಡಿಯಲ್ಲ ಎಂಬುದನ್ನು ಎಷ್ಟೋ ಪ್ರತಿಭಾವಂತರು ಸಾಧಿಸಿ ಸಾಬೀತು ಮಾಡಿದ್ದಾರೆ. ರಾಜಸ್ತಾನದ ಪ್ರಥಮ ಅಂಧ ನ್ಯಾಯಮೂರ್ತಿ ಬ್ರಹ್ಮಾನಂದ ಶರ್ಮ ಅವರು ಕೂಡ ಈ ಸಾಲಿನಲ್ಲಿ ನಿಲ್ಲುತ್ತಾರೆ. ಇವರು ಅಜ್ಮೀರ್ ಜಿಲ್ಲೆಯ ಸರ್ವಾರ್ ಪಟ್ಟಣದ ಸಿವಿಲ್ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿ (ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್).
ಇವರ ಅಂಧತ್ವವು ನ್ಯಾಯ ನಿರ್ಣಯಕ್ಕೆ ಯಾವುದೇ ರೀತಿಯಲ್ಲಿಯೂ ತೊಡಕಾಗಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವ ನ್ಯಾಯದೇವತೆಯ ಪ್ರತಿರೂಪದಂತಿರುವ ನ್ಯಾ.ಶರ್ಮ ದಕ್ಷತೆ, ಕರ್ತವ್ಯ ನಿಷ್ಠೆ ಮತ್ತು ಸಮರ್ಥ ಕಾರ್ಯನಿರ್ವಹಣೆಗೆ ಹೆಸರಾಗಿದ್ದಾರೆ.
ಇವರು ಎಷ್ಟೋ ಗಂಭೀರ ಪ್ರಕರಣಗಳ ಬಗ್ಗೆ ಸಮರ್ಥ ತೀರ್ಪು ನೀಡಿದ ನ್ಯಾಯಮೂರ್ತಿ ಎನಿಸಿದ್ದಾರೆ. ದೃಷ್ಟಿದೋಷದಿಂದಾಗಿ ಓದಲು ಸಾಧ್ಯವಾಗದ ಇವರು ದಾಖಲೆಗಳು ಮತ್ತು ಕಲಾಪಗಳ ವಾದ ಪ್ರತಿವಾದಗಳನ್ನು ಆಲಿಸಿ ನ್ಯಾಯಸಮ್ಮತ ತೀರ್ಪು ನೀಡುತ್ತಾರೆ.
ಬಾಲ್ಯದಿಂದಲೂ ಪ್ರತಿಭಾವಂತರಾಗಿರುವ ಇವರ ಅಮೂಲ್ಯ ದೃಷ್ಟಿಯನ್ನು ಗ್ಲಾಕೋಮಾ 22ನೇ ವಯಸ್ಸಿನಲ್ಲಿ ಕಸಿದುಕೊಂಡಿತು. ಆದರೆ ಈ ಆಘಾತದಿಂದ ಬ್ರಹ್ಮಾನಂದ ಶರ್ಮ ವಿಚಲಿತರಾಗಲಿಲ್ಲ.
ಬಿಲ್ವಾಡದಲ್ಲಿ ಜನಿಸಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಇವರಿಗೆ ಬಾಲ್ಯದಿಂದಲೂ ನ್ಯಾಯಾಧೀಶರಾಗಬೇಕೆಂಬ ಆಕಾಂಕ್ಷೆ ಇತ್ತು. ದೃಷ್ಟಿ ಹೀನತೆಯಿಂದ ತಮ್ಮ ಗುರಿಯನ್ನು ಅವರು ಬಿಟ್ಟುಕೊಡಲಿಲ್ಲ. ಬದಲಿಗೆ ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ಮುನ್ನಡೆದರು. 2013ರಲ್ಲಿ ರಾಜಸ್ತಾನ ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಹಾಜರಾದರು. ಕಬ್ಬಿಣದ ಕಡಲೆಯಂಥ ಈ ಪರೀಕ್ಷೆಯಲ್ಲಿ ಒಂದೇ ಯತ್ನಕ್ಕೆ ತೇರ್ಗಡೆಯಾಗಿದ್ದಲ್ಲದೇ 83ನೇ ರ್ಯಾಂಕ್ ಗಳಿಸಿದರು.
ಪರೀಕ್ಷೆಯನ್ನು ತೆಗೆದುಕೊಳ್ಳುವುದಕ್ಕೂ ಮುನ್ನ ಕೋಚಿಂಗ್ ಕೇಂದ್ರದಲ್ಲಿ ತರಬೇತಿ ಪಡೆಯಲು ಹೋಗಿದ್ದ ಇವರಿಗೆ ಯಾರೂ ಸಹಾಯ ಮಾಡಲಿಲ್ಲ. ಬದಲಿಗೆ ಕುಟುಂಬದ ಸದಸ್ಯರು ಆಸರೆಯಾದರು. ಇವರ ಪತ್ನಿ ಶಾಲಾ ಶಿಕ್ಷಕಿ ಪುಸ್ತಕಗಳನ್ನು ಓದಿ ಇವರಿಗೆ ತಿಳಿಸುತ್ತಿದ್ದರು. ಪ್ರಚಂಡ ಗ್ರಹಿಕೆ ಮತ್ತು ಜ್ಞಾಪಕಶಕ್ತಿಯಿಂದ ಅವರುಗಳನ್ನು ತಮ್ಮ ಸ್ಮತಿಪಟಲದಲ್ಲಿ ದಾಖಲಿಸುತ್ತಾ ಹೋದರು. ಇವರ ಪ್ರತಿಭೆ ಮತ್ತು ಪರಿಶ್ರಮ ಫಲ ನೀಡಿತು.
ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ಇವರು ಒಂದು ವರ್ಷ ತರಬೇತಿ ಪಡೆದು 2016ರಿಂದ ನ್ಯಾಯಾಧೀಶರಾಗಿ ಸೇವೆಗೆ ಸೇರ್ಪಡೆಯಾದರು. ಚಿತ್ತೋರ್ಗಢ ಮತ್ತು ಸರ್ವಾರ್ಗಳಲ್ಲಿ ಕಾರ್ಯನಿರ್ವಹಿಸಿರುವ ಇವರ ಶ್ರವಣ ಶಕ್ತಿ ಮತ್ತು ಗ್ರಹಿಕೆ ಸಾಮಥ್ರ್ಯ ದೈವದತ್ತ ಕೊಡಗೆಯಂತಿದೆ.
ಪ್ರತಿದಿನ ಕೋರ್ಟ್ಗೆ ಅನೇಕ ವಕೀಲರು ಬರುತ್ತಾರೆ. ಅವರ ಹೆಜ್ಜೆ ಶಬ್ಧಗಳು ಮತ್ತು ಧ್ವನಿಯಿಂದಲೇ ಅವರನ್ನು ಕರಾರುವಕ್ಕಾಗಿ ಗುರುತಿಸುವ ಚಾಣಾಕ್ಷಮತಿ ಇವರದ್ದು.
ಅಂಧರು ನ್ಯಾಯಾಧೀಶರಾಗುವುದು ಸಾಧ್ಯವಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ನ್ಯಾಯದೇವತೆ ಕಣ್ಣಿಗೆ ಬಟ್ಟೆಕಟ್ಟಿಕೊಂಡು ನ್ಯಾಯ ನಿರ್ಣಹಿಸುವುದಿಲ್ಲವೇ? ಎಂದು ಪ್ರಶ್ನಿಸುವ ಇವರು ನೀಡಿರುವ ಬಹುತೇಕ ಎಲ್ಲ ತೀರ್ಪುಗಳು ನಿಖರವಾಗಿವೆ.
ನ್ಯಾಯಾಂಗದಲ್ಲಿ ಮತ್ತಷ್ಟು ತಾಂತ್ರಿಕ ಸುಧಾರಣೆಯಾಗಬೇಕು. ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಅನಕ್ಷರಸ್ಥರಿಗೆ ನೆರವಾಗುವಂಥ ಅನುಕೂಲಗಳು ಜಾರಿಗೆ ಬರಬೇಕು ಎನ್ನುತ್ತಾರೆ ನ್ಯಾಯಮೂರ್ತಿ ಶರ್ಮ.