ಮೈಸೂರು, ಏ.15- ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಿ.ಟಿ.ದೇವೇಗೌಡ ಅವರನ್ನೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪರ ಮತ ಯಾಚನೆ ಮಾಡಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತಪರ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದೇವೆ. ಆದ್ದರಿಂದ ಎಲ್ಲರೂ ಜಿ.ಟಿ.ದೇವೇಗೌಡರನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಉದ್ಬೂರು, ಲಿಂಗಾಂಬುದಿ ಪಾಳ್ಯಕ್ಕೆ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಹಾರ ಹಾಕಿ ವಾದ್ಯಗೋಷ್ಠಿಯೊಂದಿಗೆ ಗ್ರಾಮಸ್ಥರು ಬರಮಾಡಿಕೊಂಡರು.
ತೆರೆದ ವಾಹನದಲ್ಲಿ ಸಂಚರಿಸಿ ಅವರು ಪ್ರಚಾರ ನಡೆಸಿದರು. ಈ ವೇಳೆ ಕೆಲವೆಡೆ ಕುಮಾರಸ್ವಾಮಿ ಅವರ ಮೈಮೇಲೆ ಅಭಿಮಾನದಿಂದ ಹೂವು ಎರಚುತ್ತಿದ್ದುದು ಕಂಡುಬಂದಿತು.
ಬಿರು ಬಿಸಿಲಿನ ನಡುವೆಯೂ ಪ್ರಚಾರದಲ್ಲಿದ್ದಾಗ ಅಭಿಮಾನಿಗಳು ಎಳನೀರು ತಂದು ಕೊಡುತ್ತಿದ್ದುದನ್ನು ಕುಡಿದು ದಣಿವಾರಿಸಿಕೊಂಡು ಮತ್ತೆ ಪ್ರಚಾರ ಮುಂದುವರಿಸಿದರು. ಇಂದು 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಭ್ಯರ್ಥಿ ಜಿ.ಟಿ.ದೇವೇಗೌಡ ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಕುಮಾರಸ್ವಾಮಿ ಪ್ರಚಾರ ನಡೆಸಿದರು.