ಬೆಂಗಳೂರು, ಏ.15-ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಮುಖ ರಾಜಕೀಯ ಪಕ್ಷಗಳು ರಾಜ್ಯಾದ್ಯಂತ ಅಬ್ಬರದ ಪ್ರಚಾರ ನಡೆಸಿವೆಯಾದರೂ ಇನ್ನೂ ಚುನಾವಣೆಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಿಲ್ಲ.
ಚುನಾವಣೆಗೆ ಕೇವಲ 30 ದಿನಗಳಷ್ಟೆ ಬಾಕಿ ಉಳಿದಿದೆ. ಅಧಿಸೂಚನೆ ಹೊರಬೀಳಲು ಇನ್ನೆರಡು ದಿನ ಬಾಕಿ ಇದೆ. ಯಾವುದೇ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿಲ್ಲ.
ಕಳೆದ ಮಾರ್ಚ್ 27ರಂದೇ ಚುನಾವಣಾ ದಿನಾಂಕ ಪ್ರಕಟವಾಗಿ ನೀತಿ ಸಂಹಿತೆ ಜಾರಿಯಾದರೂ ಅಭ್ಯರ್ಥಿಗಳ ಆಯ್ಕೆ ಮಾಡಲು ರಾಜಕೀಯ ಪಕ್ಷಗಳು ಇನ್ನೂ ಕೊಸರಾಡುತ್ತಿವೆ. ಬಿಜೆಪಿ 72 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿ ಬಂಡಾಯ ಭೀತಿ ಎದುರಿಸುತ್ತಿದೆ. 130 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಆಯ್ಕೆಗೆ ತಿಣುಕಾಡುತ್ತಿದೆ. ಇಂದು ಮಧ್ಯಾಹ್ನ ಅಭ್ಯರ್ಥಿಗಳ ಆಯ್ಕೆ ಮಾಡುವುದಾಗಿ ಹೇಳಿದೆ. ಜೆಡಿಎಸ್ ಒಂದು ತಿಂಗಳ ಹಿಂದೆಯೇ 126 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ, ಪ್ರಚಾರ ನಡೆಸುತ್ತಿದ್ದು, ಇನ್ನು ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ.
ಆ ಪಕ್ಷ ಪ್ರಕಟಿಸಲಿ ಎಂದು ಈ ಪಕ್ಷ, ಈ ಪಕ್ಷದ ಅಭ್ಯರ್ಥಿಗಳ ಹೆಸರು ಹೊರಬರಲಿ ಎಂದು ಆ ಪಕ್ಷ ಎದುರು ನೋಡುತ್ತಿದೆ. ಒಟ್ಟಾರೆ ನಾಮಪತ್ರ ಸಲ್ಲಿಕೆ ದಿನಾಂಕ ಕೊನೆಕ್ಷಣದವರೆಗೂ ಈ ಕಸರತ್ತು ಮುಂದುವರೆಯುವುದರಿಂದ ಆಕಾಂಕ್ಷಿಗಳಲ್ಲಿ ಗೊಂದಲವೂ ಮುಂದುವರೆದಿದೆ.
ಮುಕ್ತವಾಗಿ ಪ್ರಚಾರ ಕಣಕ್ಕಿಳಿಯಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಅವರ ಬೆಂಬಲಿಗರೂ ಕೂಡ ಏನು ಮಾಡಲು ತೋಚದೆ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ತಮ್ಮ ನಾಯಕರಿಗೆ ಟಿಕೆಟ್ ಸಿಗುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಇಂದು ಮಧ್ಯಾಹ್ನ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಿದೆ ಎಂದು ಪ್ರಕಟಿಸಿದೆ. ಅದನ್ನು ನೋಡಿಕೊಂಡು ಬಿಜೆಪಿ ತನ್ನ ಎರಡನೇ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಜೆಡಿಎಸ್ ಕೂಡ ಈ ಎರಡೂ ಪಕ್ಷಗಳ ಬೆಳವಣಿಗೆ ಗಮನಿಸಿ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಒಟ್ಟಾರೆ ಕೊನೆ ಕ್ಷಣದವರೆಗೂ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರೆಯಲಿರುವುದರಿಂದ ಪ್ರಚಾರಕ್ಕೆ ಹೆಚ್ಚಿನ ಸಮಯ ಸಿಗುವುದಿಲ್ಲ. ಚುನಾವಣಾ ಆಯೋಗ ನಿಗದಿಪಡಿಸಿದ ಸಮಯವಷ್ಟೇ ಅಭ್ಯರ್ಥಿಗಳಿಗೆ ದೊರೆಯುತ್ತದೆ. ಟಿಕೆಟ್ ದೊರೆತಿರುವವರು ಈಗಾಗಲೇ ಒಂದರೆಡು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಟಿಕೆಟ್‍ಗಾಗಿ ಕಾಯುತ್ತಿರುವವರು ಇತ್ತ ಪ್ರಚಾರ ಮಾಡಲೂ ಆಗದೆ, ಅತ್ತ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ಕಾಲ ಹಾಕುತ್ತಿದ್ದಾರೆ. ಎಲ್ಲದಕ್ಕೂ ಒಂದೆರಡು ದಿನದಲ್ಲಿ ಸ್ಪಷ್ಟ ಉತ್ತರ ದೊರೆಯಲಿದೆ.