ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 4ನೇ ಕಂತಿನ 144.82 ಕೋಟಿ ರೂ. ಬಿಡುಗಡೆ

ಬೆಂಗಳೂರು,ಏ.15-ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಕಳೆದ ಆರ್ಥಿಕ ಸಾಲಿನ 4ನೇ ಕಂತಿನಲ್ಲಿ 144.82 ಕೋಟಿ ರೂ. ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ 214 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ 75 ವಿಧಾನಪರಿಷತ್ ಸದಸ್ಯರ ಕ್ಷೇತ್ರಗಳಿಗೆ ತಲಾ 50.11 ಲಕ್ಷ ರೂ.ನಂತೆ ಮಾರ್ಚ್ ಕೊನೆ ವಾರದಲ್ಲಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಕಳೆದ ನವೆಂಬರ್‍ವರೆಗೆ ಮೂರು ಕಂತುಗಳಲ್ಲಿ ಪ್ರದೇಶಾಭಿವೃದ್ದಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಲಾಗಿತ್ತು. 4ನೇ ಕಂತಿನ ಅನುದಾನವನ್ನು ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ ಖಾತೆಯಲ್ಲಿಟ್ಟುಕೊಂಡು ಅಗತ್ಯತೆಗೆ ಅನುಗುಣವಾಗಿ ಖರ್ಚು ಮಾಡಬೇಕೆಂದು ಸೂಚಿಸಲಾಗಿದೆ.
ಶಾಸಕರಿಂದ ಕ್ರಿಯಾಯೋಜನೆ ಪಡೆದು ಪರಿಷ್ಕರಿಸಲಾದ ಮಾರ್ಗಸೂಚಿಗಳ ಅನ್ವಯ ಈ ಅನುದಾನವನ್ನು ಬಳಸಬೇಕು. ನಿಯಮಾನುಸಾರ ಹಣ ಬಳಕೆ ಮಾಡಿದ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳು ಸಲ್ಲಿಸಬೇಕು. ಜೊತೆಗೆ ನಿಗದಿತ ಅವಧಿಯಲ್ಲೇ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ