ಬೆಂಗಳೂರು, ಏ.14- ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಸಂಚರಿಸುವ ಮಹಿಳೆಯನ್ನು ಹಿಂಬಾಲಿಸಿ ಸರಗಳನ್ನು ಅಪಹರಿಸುತ್ತಿದ್ದ ಹಾಗೂ ಬೀಗ ಹಾಕಿರುವ ಮನೆಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಇರಾನಿ ಪ್ರಜೆಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಫರ್ಮಾನ್ ಅಲಿ (25) ಮತ್ತು ಬಾಕರ್ ಅಲಿ (30) ಬಂಧಿತರು.
ಕಳೆದ ಡಿ.19ರಂದು ರಾತ್ರಿ 1.30ರ ಸಮಯದಲ್ಲಿ ರೆಹನಾ ಬೇಗಂ ಎಂಬುವವರು ತಮ್ಮ ಸಹೋದರರ ಜತೆ ಸರಾಯಿಪಾಳ್ಯದ ತೂಬಾ ಲೇಔಟ್ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಇವರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 22 ಪ್ರಕರಣಗಳನ್ನು ಪತ್ತೆಹಚ್ಚಿ 1 ಕೆಜಿ 83 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 31.92 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಇಬ್ಬರು ಆರೋಪಿಗಳು ದ್ವಿಚಕ್ರ ವಾಹನಗಳನ್ನು ಕಳವು ಮಾಡಿಕೊಂಡು ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವ ಮಹಿಳೆಯರನ್ನು ಗುರುತಿಸಿ ಅವರ ಸರಗಳನ್ನು ಅಪಹರಿಸುತ್ತಿದ್ದರಲ್ಲದೆ ಬೀಗ ಹಾಕಿರುವ ಮನೆಗಳ ಕಳ್ಳತನ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಗಳ ಬಂಧನದಿಂದ ಹೆಣ್ಣೂರು ಠಾಣೆಯ 5, ಇಂದಿರಾನಗರ 4, ರಾಮಮೂರ್ತಿನಗರ 3, ವಿದ್ಯಾರಣ್ಯಪುರ 3, ಬಾಗಲಗುಂಟೆ 2, ಕೊತ್ತನೂರು, ಬಾಣಸವಾಡಿ, ಡಿಜೆ ಹಳ್ಳಿ ಠಾಣೆಯ ತಲಾ ಒಂದೊಂದು ಪ್ರಕರಣಗಳು, ಪುಲಕೇಶಿನಗರ ಠಾಣೆಯ 1, ಬಯ್ಯಪ್ಪನಹಳ್ಳಿ ಠಾಣೆಯ 1 ಪ್ರಕರಣ ಸೇರಿ ಒಟ್ಟು 22 ಪ್ರಕರಣಗಳು ಪತ್ತೆಯಾದಂತಾಗಿವೆ.
ಪೂರ್ವ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿವರ್ಗದ ಯಶಸ್ವಿ ಕಾರ್ಯಾಚರಣೆಯನ್ನು ನಗರ ಪೊಲೀಸ್ಆ ಯುಕ್ತರು ಶ್ಲಾಘಿಸಿದ್ದಾರೆ.