ವಿಶ್ವಸಂಸ್ಥೆ, ಏ.14- ಭಾರತದಲ್ಲಿ ನಡೆಯುತ್ತಿರುವ ದಲಿತ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ಸಿಖ್ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ.
ವಿಶ್ವಸಂಸ್ಥೆಯ ಕಚೇರಿಯ ಬಳಿ ಸಿಖ್ ಸಮುದಾಯದವರು ಪ್ರತಿಭಟನೆ ನಡೆಸಿದ್ದು, ಕಪ್ಪು ಬ್ಯಾಂಡ್, ಕಪ್ಪು ಟರ್ಬನ್ಗಳನ್ನು ಧರಿಸಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಒಂದೆಡೆ ಸಿಖ್ ಸಮುದಾಯ, ಮುಸ್ಲಿಮರು, ಕ್ರೈಸ್ತರು, ದಲಿತರ ವಿರುದ್ಧ ದೌರ್ಜನ್ಯ ನಡೆಯುತ್ತಿದ್ದು ಅಂಬೇಡ್ಕರ್ ಅವರ ಆದರ್ಶಗಳಿಗೆ ಹಾನಿ ಉಂಟಾಗುತ್ತಿದೆ. ಮತ್ತೊಂದೆಡೆ ಭಾರತ ಸರ್ಕಾರ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿದೆ ಇದು ಭಾರತ ಸರ್ಕಾರದ ಬೂಟಾಟಿಕೆಯನ್ನು ತೋರುತ್ತದೆ ಎಂದು ಪ್ರತಿಭಟನಾ ನಿರತರು ಹೇಳಿದ್ದಾರೆ.
ಭಾರತದಲ್ಲಿ ಸ್ವರ್ಣ ಮಂದಿರದ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಸಿಖ್ ಸಮುದಾಯದ ಸಾವಿರಾರು ಜನರನ್ನು ಹತ್ಯೆ ಮಾಡಲಾಗಿದೆ. ಆದರೂ ಸಹ ಅದಕ್ಕೆ ಕಾರಣವಾದವರ ವಿರುದ್ಧ ಈ ವರೆಗೂ ಕ್ರಮ ಕೈಗೊಂಡಿಲ್ಲ ಎಂದು ಸಿಖ್ ಸಮುದಾಯದವರು ಆರೋಪಿಸಿದ್ದಾರೆ.