ಬೆಂಗಳೂರು, ಏ.14- ಹಲವು ಕಗ್ಗಂಟ್ಟುಗಳ ನಡುವೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಹುತೇಕ ಸಿದ್ಧಗೊಂಡಿದ್ದು, ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಅಭ್ಯರ್ಥಿಗಳ ಆಯ್ಕೆಯ ಸಂಪೂರ್ಣ ಹೊಣೆಗಾರಿಕೆಯನ್ನು ಹೈಕಮಾಂಡ್ ರಾಜ್ಯ ನಾಯಕರ ಹೆಗಲಿಗೆ ಹೊರಿಸಿರುವ ಮಹತ್ವದ ಬೆಳವಣಿಗೆ ನಡೆದಿದೆ.
ನಿನ್ನೆ ನವದೆಹಲಿಯಲ್ಲಿ ನಡೆದ ಹಲವು ಸುತ್ತಿನ ಸಭೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿತ್ತು. ಬಾಕಿ ಇದ್ದ 24 ಕ್ಷೇತ್ರಗಳಲ್ಲಿ ತೀವ್ರ ಗೊಂದಲ ಉಂಟಾಗಿದ್ದು, ಹಿರಿಯ ನಾಯಕರುಗಳು ಅಡ್ಡಗಾಲು ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಗೊಂದಲ ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯ ಹೊಣೆಗಾರಿಕೆಯನ್ನು ಹೈಕಮಾಂಡ್ ಹೆಗಲಿಗೆ ಹೊರಿಸಿ ರಾಜ್ಯ ನಾಯಕರು ಕೈ ತೊಳೆದುಕೊಳ್ಳಲು ಮುಂದಾದರು. ಆದರೆ, ಕೊನೆ ಕ್ಷಣದಲ್ಲಿ ಇದಕ್ಕೆ ಅವಕಾಶ ನೀಡದ ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ ಅವರು ಅಭ್ಯರ್ಥಿಗಳ ಆಯ್ಕೆಯ ಸಂಪೂರ್ಣ ಹೊಣೆಗಾರಿಕೆ ರಾಜ್ಯ ನಾಯಕರಿಗೆ ಸೇರಿದ್ದು, ಯಾವುದೇ ಕಾರಣಕ್ಕೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಪಕ್ಷದ ಗೆಲುವು ಕೂಡ ರಾಜ್ಯ ನಾಯಕರಿಗೆ ಸೇರಿದೆ ಎಂಬ ಖಡಕ್ ಸೂಚನೆ ನೀಡಿದ್ದಾರೆ.
ಹೀಗಾಗಿ ಎಲ್ಲಾ ಕೆಲಸ ಮುಗಿಯಿತು ಎಂದು ಬೆಂಗಳೂರಿನತ್ತ ಪ್ರಯಾಣ ಬೆಳೆಸಲು ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಧರ್ಮಸಂಕಟಕ್ಕೆ ಸಿಲುಕಿದ್ದು, ಮತ್ತೆ ದೆಹಲಿಯಲ್ಲೇ ಉಳಿದುಕೊಂಡು ಇಂದು ಬೆಳಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ. ಮಧ್ಯಾಹ್ನ ಸೋನಿಯಾಗಾಂಧಿ ಅವರು ವಿದೇಶಕ್ಕೆ ತೆರಳಬೇಕಾದ್ದರಿಂದ ಆ ವೇಳೆಗೆ ಪಟ್ಟಿಯನ್ನು ಅಂತಿಮಗೊಳಿಸಲು ತರಾತುರಿಯಲ್ಲಿ ಬೆಳಗ್ಗೆ ಹಲವಾರು ಸುತ್ತುಗಳ ಸಭೆ ನಡೆಸಲಾಗಿದೆ.
ಹೈಕಮಾಂಡ್ ನೇರವಾಗಿ ಅಭ್ಯರ್ಥಿಗಳ ಆಯ್ಕೆಯ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಅದೇನಿದ್ದರೂ ರಾಜ್ಯ ನಾಯಕರೇ ಒಟ್ಟಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು. ಮುಂದೆ ಯಾವುದೇ ಗೊಂದಲಗಳು ಎದುರಾದರೂ ಅದನ್ನು ರಾಜ್ಯದ ನಾಯಕರೇ ಬಗೆಹರಿಸಿಕೊಳ್ಳಬೇಕು. ಟಿಕೆಟ್ ಹಂಚಿಕೆಯ ಗೊಂದಲಗಳು ಚುನಾವಣೆ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆ ವಹಿಸಬೇಕೆಂದು ಸೋನಿಯಗಾಂಧಿ ಸೂಚನೆ ಕೊಟ್ಟಿದ್ದಾರೆ.
ಹೀಗಾಗಿ ಬೆಂಗಳೂರಿಗೆ ಹೊರಟ ನಿಂತ ರಾಜ್ಯ ನಾಯಕರು ದೆಹಲಿಯಲ್ಲೇ ಉಳಿದುಕೊಂಡು 224 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ.
ಮೊದಲ ಹಂತದಲ್ಲಿ 150ಕ್ಕೂ ಹೆಚ್ಚು ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ನಂತರ ಹಂತ ಹಂತವಾಗಿ ಉಳಿದವರ ಟಿಕೆಟ್ಗಳನ್ನು ಪ್ರಕಟಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವೀರಪ್ಪಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಅವರುಗಳು ಹಲವಾರು ಕ್ಷೇತ್ರಗಳ ವಿಷಯದಲ್ಲಿ ಆಕ್ಷೇಪವೆತ್ತಿದ್ದರಿಂದ ಟಿಕೆಟ್ ಹಂಚಿಕೆ ಕಗ್ಗಂಟ್ಟಾಗಿತ್ತು. ಸೋನಿಯಾಗಾಂಧಿ ಸೂಚನೆ ಮೇರೆಗೆ ರಾಹುಲ್ಗಾಂಧಿ ಸಮ್ಮುಖದಲ್ಲಿ ಇಂದು ಮಧ್ಯಾಹ್ನದವರೆಗೂ ನಿರಂತರವಾಗಿ ಸಭೆ ನಡೆಸಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಲಾಗಿದೆ.