ವೋಟಿಗಾಗಿ ಬೇರೆ ಪಕ್ಷಗಳಿಂದ ಅಂಬೇಡ್ಕರ್ ಜಯಂತಿ ಆದರೆ ಆಶಯಗಳನ್ನು ಪಾಲಿಸುತ್ತಿರುವುದು ಕಾಂಗ್ರೆಸ್‍ ಮಾತ್ರ

ಬೆಂಗಳೂರು, ಏ.14-ಚುನಾವಣಾ ಸಂದರ್ಭದಲ್ಲಿ ವೋಟಿಗಾಗಿ ಬೇರೆ ಬೇರೆ ಪಕ್ಷದವರು ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ. ಆದರೆ ಅವರ ಆಶಯಗಳನ್ನು ಪಾಲಿಸುತ್ತಿರುವುದು ಕಾಂಗ್ರೆಸ್‍ನವರು ಮಾತ್ರ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು.

ಭಾರತರತ್ನ ಅಂಬೇಡ್ಕರ್ ಅವರ 127ನೆ ಜಯಂತಿ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಪಕ್ಷದವರು ಚುನಾವಣೆ ಸಂದರ್ಭದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ. ಆದರೆ ಅವರ ತತ್ವಗಳನ್ನು ಕಾಂಗ್ರೆಸ್ ಪಾಲಿಸಿಕೊಂಡು ಬಂದಿದೆ, ಬಿಜೆಪಿಯವರಲ್ಲ ಎಂದ ಅವರು, ಕಾಂಗ್ರೆಸ್‍ನಲ್ಲಿ ಸಾಕಷ್ಟು ಜನ ದಲಿತ ಮುಖಂಡರಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶಕ್ಕೆ ಯಾರೂ ನೀಡದಂತಹ ಕೊಡುಗೆಯನ್ನು ಅಂಬೇಡ್ಕರ್ ನೀಡಿದ್ದಾರೆ. ಅವರೊಬ್ಬ ಮಹಾನ್ ಮಾನವತಾವಾದಿ. ಸಂವಿಧಾನ ರಚನೆಯ ಕೀರ್ತಿಯೂ ಅವರಿಗೇ ಸಲ್ಲುತ್ತದೆ. ನಮ್ಮ ಸಂವಿಧಾನವನ್ನು ಬೇರೆ ದೇಶದವರು ಪಾಲಿಸುತ್ತಿದ್ದಾರೆ ಎಂದು ನುಡಿದರು.

ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಯಾವುದೇ ಜಾತಿ-ಭೇದ ವಿಲ್ಲದೆ ಎಲ್ಲ ಧರ್ಮದವರು ನಮ್ಮ ಪಕ್ಷದಲ್ಲಿದ್ದಾರೆ. ಅಂಬೇಡ್ಕರ್ ಅವರ ಆಶಯವನ್ನು ನಮ್ಮ ಪಕ್ಷ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಎಂದರು.

ಬಿಜೆಪಿ, ಭಜರಂಗದಳ, ಆರ್‍ಎಸ್‍ಎಸ್‍ನವರು ನಮ್ಮದು ಆ ಜಾತಿ, ಈ ಜಾತಿ ಎಂದು ಭೇದಭಾವ ಮೂಡಿಸುತ್ತಾರೆ. ನಾವೆಲ್ಲರೂ ಒಂದೇ ಎನ್ನುವ ಮನೋಭಾವ ಅವರಲ್ಲಿಲ್ಲ. ಅಂಥವರಿಗೆ ನಾವು ಬುದ್ಧಿ ಹೇಳಬೇಕಿದೆ. ನಮ್ಮ ಸರ್ಕಾರದಲ್ಲಿ ಯಾವುದೇ ಒಂದು ಹಗರಣವಿಲ್ಲ. ಅಂಬೇಡ್ಕರ್ ಜಯಂತಿ ದಿನವಾದ ಇಂದು ನಾವೆಲ್ಲರೂ ಅಂಬೇಡ್ಕರ್ ಕನಸನ್ನು ನನಸು ಮಾಡುವುದಾಗಿ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.

ಕೇಂದ್ರದ ಮಾಜಿ ಸಚಿವ ರಾಜಶೇಖರನ್ ಮಾತನಾಡಿ, ಶೋಷಿತ ವರ್ಗದ ಏಳಿಗೆಗಾಗಿ ದುಡಿದ ಅಂಬೇಡ್ಕರ್ ರವರು ಯಾರೂ ನೀಡದ ಕೊಡುಗೆಯನ್ನು ನಮಗೆ ಕೊಟ್ಟು ಹೋಗಿದ್ದಾರೆ. ಈ ದಿನ ನಾವು ಪ್ರತಿಜ್ಞೆ ಮಾಡೋಣ ಶೋಷಿತ ವರ್ಗದವರ ಏಳಿಗೆಗಾಗಿ ದುಡಿಯೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್, ಹಿರಿಯ ಮುಖಂಡ ರಾಜಶೇಖರ್, ಹನುಮಂತರಾಯಪ್ಪ, ಜಿಲ್ಲಾಧ್ಯಕ್ಷ ಜಿ.ಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ