
ಬೆಂಗಳೂರು, ಏಪ್ರಿಲ್ 14-ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ತಮಗೆ ವೇದಿಕೆಯಲ್ಲಿ ಆಸನ ಕಲ್ಪಿಸದೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ರಾಮಚಂದ್ರ ಗೌಡ ನಾಯಕರ ವಿರುದ್ದ ಗರಂ ಆದ ಘಟನೆ ಇಂದು ನಡೆಯಿತು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಂದ ಅಂಬೇಡ್ಕರ್ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಿಜೆಪಿ ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್, ಪ್ರಕಾಶ್ ಜಾವಡೇಕರ್, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಕೆ.ಶಿವರಾಂ, ಡಿ.ಎಸ್.ವೀರಯ್ಯ ಸೇರಿದಂತೆ ಮತ್ತಿತರರು ಆಸೀನರಾಗಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ರಾಮಚಂದ್ರಗೌಡರಿಗೆ ವೇದಿಕೆ ಮೇಲೆ ಆಸನ ಹಾಕಿರಲಿಲ್ಲ. ಇದರಿಂದ ಬೇಸರಗೊಂಡ ಗೌಡರು ಪಕ್ಷದ ಸಂಸ್ಥಾಪಕರಲ್ಲಿ ನಾನೂ ಒಬ್ಬನು. ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಗೆ ನಾನೂ ಕೂಡ ನನ್ನದೇ ಆದ ಸೇವೆ ಸಲ್ಲಿಸಿದ್ದೇನೆ.ಹಿರಿಯರಾದ ನನಗೆ ವೇದಿಕೆಯಲ್ಲಿ ಕುರ್ಚಿ ಹಾಕದೆ ಅವಮಾನ ಮಾಡಿದರೆ ಹೇಗೆ ಎಂದು ಗರಂ ಆಗಿಯೇ ಪ್ರಶ್ನಿಸಿದರು.
ಇದರಿಂದ ತುಸು ಗಲಿಬಿಲಿಗೊಂಡ ಪ್ರಕಾಶ್ ಜಾವ್ಡೇಕರ್, ಡಿ.ಎಸ್.ವೀರಯ್ಯಗೆ ಏನ್ರಿ ಇದೆಲ್ಲ… ಮೊದಲೇ ಇದನ್ನೆಲ್ಲ ಸರಿಪಡಿಸಬೇಕು ತಾನೆ? ಹಿರಿಯರಿಗೆ ಆಸನದ ವ್ಯವಸ್ಥೆ ಕಲ್ಪಿಸಬೇಕು ತಾನೆ ಎಂದು ಕೋಪದಿಂದಲೇ ಪ್ರಶ್ನಿಸಿದರು.
ಇಷ್ಟಕ್ಕೆ ಸುಮ್ಮನಾಗದ ಗೌಡರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಹೊರ ಹೋಗಲು ಅಣಿಯಾದರು. ಕೂಡಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರನ್ನು ಸಮಾಧಾನಪಡಿಸಿ ವೇದಿಕೆಗೆ ಕರೆತಂದು ಕೂರಿಸಿದರು. ಆದರೂ ರಾಮಚಂದ್ರ ಗೌಡರ ಕೋಪತಾಪ ಮಾತ್ರ ಕಡಿಮೆಯಾಗಲಿಲ್ಲ.
ಈ ಘಟನೆಯಿಂದಾಗಿ ಬಿಜೆಪಿ ನಾಯಕರಿಗೆ ತುಸು ಇರಿಸುಮುರಿಸು ಉಂಟಾಯಿತು.