ಎಲ್ಲಿಯವರೆಗೆ ಪ್ರಾಮಾಣಿಕತೆಗೆ ಬೆಲೆ ದೊರೆಯುವುದಿಲ್ಲವೋ ಅಲ್ಲಿಯವರೆಗೂ ಸಮಾಜ ಬದಲಾವಣೆಯಾಗುವುದಿಲ್ಲ: ನಿಜಗುಣ ನಂದಾ ಸ್ವಾಮೀಜಿ ಅಭಿಪ್ರಾಯ

ಬೆಂಗಳೂರು,ಏ.14- ಎಲ್ಲಿಯವರೆಗೆ ಪ್ರಾಮಾಣಿಕತೆಗೆ ಬೆಲೆ ದೊರೆಯುವುದಿಲ್ಲವೋ ಅಲ್ಲಿಯವರೆಗೂ ಸಮಾಜ ಬದಲಾವಣೆಯಾಗುವುದಿಲ್ಲ ಎಂದು ಶ್ರೀ ನಿಜಗುಣ ನಂದಾ ಸ್ವಾಮೀಜಿ ಹೇಳಿದರು.

ನಯನ ಸಭಾಂಗಣದಲ್ಲಿಂದು ನಡೆದ ಕುಂ.ವೀರಭದ್ರಪ್ಪ ಅವರ ಕತ್ತೆಗೊಂದು ಕಾಲ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಾಣಿಗಳಿಗೂ ಶ್ರೇಷ್ಠತೆ ದೊರೆಯುವಂತಾಗಬೇಕು ಎಂದರು.

ಪ್ರಾಣಿಗಳಿಂದ ಸಮಾಜಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಮನುಷ್ಯನಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ. ಆದರೆ ಮನುಷ್ಯನಿಗಿರುವ ಸ್ಥಾನಮಾನ ಪ್ರಾಣಿಗಳಿಗೆ ದೊರೆತಿಲ್ಲ. ಸಮಾಜದಲ್ಲಿ ಆಕಳು ಮಾತ್ರ ಶ್ರೇಷ್ಠವಲ್ಲ. ಎಲ್ಲ ಪ್ರಾಣಿಗಳು ಶ್ರೇಷ್ಠ ಎಂಬುದನ್ನು ಕುಂ.ವೀ ಅವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ಹೇಳಿದರು.

ಮನುಷ್ಯನಿಗೆ ಬೋಧನೆ ಮಾಡಿರುವುದೇ ಪ್ರಾಣಿಗಳು ಅದರ ಜೊತೆ ಬೆರೆತವರು ಕಡಿಮೆ ಭ್ರಷ್ಟಾಚಾರಿಗಳಾಗಿರುತ್ತಾರೆ. ಸಮಾಜದಲ್ಲಿ ಎಲ್ಲ ಪ್ರಾಣಿಗಳಿಗೂ ಬೆಲೆ ಇಲ್ಲ.ಒಂದು ಪ್ರಾಣಿಯಿಂದ ಅದೃಷ್ಟ , ಮತ್ತೊಂದು ಪ್ರಾಣಿಯಿಂದ ದುರಾದೃಷ್ಟ ಎನ್ನಲಾಗುತ್ತದೆ. ಆದರೆ ಯಾವ ಪ್ರಾಣಿಯೂ ದುರಾದೃಷ್ಟವಲ್ಲ. ಎಲ್ಲವೂ ಶ್ರೇಷ್ಠವೇ ಎಂದ ಅವರು, ಶರಣರು ಪ್ರಾಣಿಗಳನ್ನು ಹೋಲಿಸಿಕೊಂಡೇ ಬೋಧನೆ ಮಾಡುತ್ತಾರೆ ಎಂದರು.

ಖ್ಯಾತ ಲೇಖಕರಾದ ಓ. ಎಲ್.ನಾಗಭೂಷಣ್ ಸ್ವಾಮಿ ಮಾತನಾಡಿ, ಸಮಾಜಕ್ಕೆ ಬೇಕಾದ ಆದರ್ಶಗಳನ್ನು ಬರವಣಿಗೆ ಮೂಲಕ ನೀಡಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ದುಡಿಯುವವರಲ್ಲಿ ಕುಂ.ವೀ ಅವರು ಕೂಡ ಒಬ್ಬರು. ಅಂಬೇಡ್ಕರ್ ಕಂಡ ಸಮಾನ ಸಮಾಜದ ಕನಸನ್ನು ಬರವಣಿಗೆ ಮೂಲಕ ತಿಳಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ತಮ್ಮ ಬರವಣಿಗೆ ಮೂಲಕವೇ ಸಮಾಜವನ್ನು ಎಚ್ಚರಿಸುವ ಕು.ವೀ ಅವರು ಸಾಹಿತ್ಯದ ಲೋಕದ ಸ್ಟಾರ್ ಲೇಖಕ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನವನ ಸಲ್ಲಿಸಲಾಯಿತು.

ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ವಿಶುಕುಮಾರ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ