ಮತದಾನದ ಸಮಯವನ್ನು ಹೆಚ್ಚಳ ಮಾಡುವ ಉದ್ದೇಶ ಆಯೋಗದ ಮುಂದಿಲ್ಲ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಸ್ಪಷ್ಟನೆ

ಬೆಂಗಳೂರು, ಏ.14- ಮತದಾನ ಸಂದರ್ಭದಲ್ಲಿ ಬಿಸಿಲಿನ ಧಗೆಯಿಂದ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಮತದಾನದ ಸಮಯವನ್ನು ಹೆಚ್ಚಳ ಮಾಡುವ ಉದ್ದೇಶ ಆಯೋಗದ ಮುಂದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದರು.

ಪ್ರೆಸ್‍ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಯೋಗದ ನಿರ್ದೇಶನದಂತೆ ಎಲ್ಲ ಮತಕೇಂದ್ರಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಯಾರಾದರೂ ಬಿಸಿಲಿನಿಂದ ಸುಸ್ತಾದಲ್ಲಿ ಒಆರ್‍ಎಸ್ ಪುಡಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ 58 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲಾಗುವುದು. ನಿಗದಿತ ಸಮಯದಲ್ಲೇ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ 4.96 ಕೋಟಿ ಮತದಾರರಿದ್ದಾರೆ. ಇದು ಹೊಸದಾಗಿ ಸೇರ್ಪಡೆಯಾಗಲು ಎಂಟೂವರೆ ಲಕ್ಷ ಅರ್ಜಿ ಬಂದಿವೆ. ಈ ಅರ್ಜಿಗಳನ್ನು ಒಂದು ವಾರದೊಳಗೆ ಅಂಗೀಕರಿಸುತ್ತೇವೆ. ಹಾಗಾಗಿ ಈ ಬಾರಿ ಐದು ಕೋಟಿ ಜನ ಮತದಾನ ಮಾಡಲಿದ್ದಾರೆ. ಎಲ್ಲ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಲು ಸಕಲ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.

58 ಸಾವಿರ ಮತಗಟ್ಟೆಯಲ್ಲಿ 5 ಕೋಟಿ ಜನ ಮತದಾನ ಮಾಡಬೇಕೆಂದರೆ ಸುಮಾರು 3.56 ಲಕ್ಷ ಸಿಬ್ಬಂದಿ ಬೇಕು. ಎಲ್ಲ ಸಿಬ್ಬಂದಿಗೆ ನಾವು ಈಗಾಗಲೇ ತರಬೇತಿ ನೀಡಿದ್ದೇವೆ ಎಂದರು.

ಇದೇ ಪ್ರಥಮ ಬಾರಿಗೆ ರಿಟರ್ನಿಂಗ್ ಆಫೀಸರ್ ಮತ್ತು ಸಹಾಯಕ ರಿಟರ್ನಿಂಗ್ ಆಫೀಸರ್‍ಗಳಿಗೆ ಜನವರಿಯಲ್ಲಿ ನಾಲ್ಕು ದಿನ ತರಬೇತಿ ನೀಡಿದ್ದೆವು. ಆಗಲೇ ಹ್ಯಾಂಡ್‍ಬುಕ್ ಮತ್ತಿತರ ಪರಿಕರ ನೀಡಿ ಎರಡು ತಿಂಗಳು ಸಮಯ ನೀಡಿ ಪರೀಕ್ಷೆ ನಡೆಸಿದ್ದೆವು. ಅದರಲ್ಲಿ ಪಾಸಾಗಿ ಸರ್ಟಿಫಿಕೆಟ್ ಪಡೆದವರನ್ನು ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು.

ಕೆಲವು ಅಧಿಕಾರಿಗಳು ಪರೀಕ್ಷೆಯಲ್ಲಿ ಫೇಲಾಗಿದ್ದಾರೆ. ಅವರಿಗೆ ಮತ್ತೊಮ್ಮೆ ನಾವು ತರಬೇತಿ ಕೊಡುತ್ತೇವೆ ಎಂದರು.
ಪಿಂಕ್ ಮತಗಟ್ಟೆ: ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಮಹಿಳೆಯರು ನಿರಾಸಕ್ತಿ ತೋರಿಸುತ್ತಿದ್ದರು.973 ಜನಸಂಖ್ಯೆ ರೇಷಿಯೋದಲ್ಲಿ ಕೇವಲ 953 ರೇಷಿಯೋ ಆಧಾರದಲ್ಲಿ ಮಹಿಳೆಯರು ನೋಂದಣಿ ಮಾಡಿಕೊಳ್ಳುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ.
973 ರೇಷಿಯೋದಲ್ಲಿ 972 ರೇಷಿಯೋದಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಇನ್ನೂ ಉತ್ತಮಪಡಿಸಲು ರಾಜ್ಯದೆಲ್ಲೆಡೆ ಪಿಂಕ್ ಮತಗಟ್ಟೆಗಳನ್ನು ಸ್ಥಾಪನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ನಗರ ಪ್ರದೇಶಗಳಲ್ಲಿ ಐದು, ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಪಿಂಕ್ ಮತಗಟ್ಟೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಕೆಳ ಮಹಡಿಯಲ್ಲಿ ಮತಗಟ್ಟೆಗಳು: ಕಳೆದ ಬಾರಿಯ ಚುನಾವಣೆಯಲ್ಲಿ 850 ಮತಕೇಂದ್ರಗಳು ಮೊದಲ ಮಹಡಿಯಲ್ಲಿದ್ದವು. ಆಗ ವಿಕಲಚೇತನರು, ವಯಸ್ಸಾದವರು, ದುರ್ಬಲರು ಮತ ಹಾಕಲು ತೊಂದರೆಪಟ್ಟಿದ್ದರು. ಹಾಗಾಗಿ ಈ ಬಾರಿ ಎಲ್ಲ ಮತಗಟ್ಟೆಗಳು ಕೆಳಮಹಡಿಯಲ್ಲೇ ಇರಬೇಕೆಂದು ಕಡ್ಡಾಯ ಮಾಡಿದ್ದೇವೆ ಎಂದು ಹೇಳಿದರು.

ಈ ಬಾರಿ ನಿವರ್ಸತಿಗರು, ತೃತೀಯ ಲಿಂಗಿಗಳು ಎಸ್‍ಸಿ/ಎಸ್‍ಟಿ ಅವರನ್ನು ಸರ್ವೆ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಸಂಜೀವ್‍ಕುಮಾರ್ ತಿಳಿಸಿದರು.

ಹೋಲಿಕೆ (ಟ್ಯಾಲಿ): ಇದೇ ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಇವಿಎಂ ಮತಯಂತ್ರಗಳಲ್ಲಿ ವಿವಿ ಪ್ಯಾಟ್ ಅಳವಡಿಕೆ ಮಾಡಿದ್ದೇವೆ. ಹಕ್ಕು ಚಲಾಯಿಸಿದವರು ಕೇವಲ 7 ಸೆಕೆಂಡ್‍ನಲ್ಲಿ ಮತ ಹಾಕಿದ ಅಭ್ಯರ್ಥಿ ಹೆಸರನ್ನು ಇದರಲ್ಲಿ ನೋಡಬಹುದು. ಚುನಾವಣೆ ಮುಗಿದ ನಂತರ ವಿವಿ ಪ್ಯಾಟ್ ಅನ್ನು ಪ್ರತ್ಯೇಕವಾಗಿ ಇಟ್ಟಿರುತ್ತೇವೆ. ಮತ ಎಣಿಕೆ ಸಂದರ್ಭದಲ್ಲಿ ವಿವಿ ಪ್ಯಾಟ್‍ನಲ್ಲಿರುವ ದಾಖಲೆಗಳನ್ನು ಹೋಲಿಕೆ ಮಾಡಿ ಪರಿಶೀಲಿಸುತ್ತೇವೆ. ಹಾಗಾಗಿ ಯಾವುದೇ ಲೋಪದೋಷ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೊಕದ್ದಮೆ ದಾಖಲು: ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ರಾಜಕೀಯ ಮುಖಂಡರು, ಪಕ್ಷಗಳು ಮತ್ತು ಮಾಧ್ಯಮದವರಿಗೆ ನೀತಿ-ನಿಯಮಗಳ ಬಗ್ಗೆ ಅರಿವು ಮಾಡಿಕೊಟ್ಟಿದ್ದೇವೆ. ಕಾಸಿಗಾಗಿ ಸುದ್ದಿ ಪ್ರಕಟಿಸುವ ಸಂಬಂಧ ಹದ್ದಿನ ಕಣ್ಣಿಟ್ಟಿದ್ದೇವೆ. ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತು ಹಾಗೂ ವರದಿಗಳನ್ನು ಆಯಾ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸರಿದೂಗಿಸುತ್ತೇವೆ.

ಒಂದು ವೇಳೆ ನೀತಿಸಂಹಿತೆ ಉಲ್ಲಂಘಿಸಿದ್ದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಮೊಕದ್ದಮೆ ದಾಖಲಿಸುತ್ತೇವೆ ಎಂದು ಮುಖ್ಯ ಚುನಾವಣಾಧಿಕಾರಿ ಎಚ್ಚರಿಸಿದ್ದಾರೆ.

ಸಹಾಯಕ್ಕೆ ಬಂದಿವೆ ಆ್ಯಪ್:
ನಗರ ಪ್ರದೇಶದ ನಿವಾಸಿಗಳು ಮತ್ತು ರಾಜ್ಯದ ಮತದಾರರು ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮತ್ತು ಎಲ್ಲಾದರೂ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ ದೂರು ದಾಖಲಿಸಲು ಅನುಕೂಲವಾಗುವಂತೆ ನಾಲ್ಕು ಆ್ಯಪ್ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ಸುವಿಧಾ, ಸಮಾಧಾನ, ನಾವಿಗೇಷನ್ ಹಾಗೂ ಮಾನಿಟರಿಂಗ್ ಎಂಬ ನಾಲ್ಕು ಆ್ಯಪ್‍ಗಳು ಬಿಡುಗಡೆಯಾಗಿವೆ.

ಸುವಿಧಾ: ಇದರಲ್ಲಿ ಚುನಾವಣೆಯ ಸಂಪೂರ್ಣ ಮಾಹಿತಿ, ವಿಧಾನ, ಅಧಿಕಾರಿಗಳ ಪೂರ್ಣ ವಿವರ ಪಡೆಯಬಹುದು.
ಸಮಾಧಾನ: ಇದರಲ್ಲಿ ಯಾರು, ಎಲ್ಲೇ ನೀತಿ ಸಂಹಿತೆ ಉಲ್ಲಂಘಿಸಿದ್ದರೆ, ಯಾರಾದರು ಮತದಾರರನ್ನು ಸೆಳೆದರೆ ಅಂಥವರ ವಿರುದ್ಧ ಸಾರ್ವಜನಿಕರೇ ಫೆÇೀಟೋ ಸಹಿತ ದೂರು ನೀಡಬಹುದು. ಹೀಗೆ ಬಂದ ದೂರನ್ನು 24 ಗಂಟೆಯೊಳಗೆ ಇತ್ಯರ್ಥ ಪಡಿಸಬೇಕು. ಹಾಗೆ ಮಾಡದಿದ್ದರೆ ಅಂತಹ ಅಧಿಕಾರಗಳ ವಿರುದ್ಧ ಆಯೋಗ ಶಿಸ್ತು ಕ್ರಮ ತೆಗೆದುಕೊಳ್ಳುತ್ತದೆ.

ನಾವಿಗೇಷನ್ ಆ್ಯಪ್: ಇದರಲ್ಲಿ ಮತದಾರ ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬಹುದು ಎಂಬುದರ ಬಗ್ಗೆ ಮಾರ್ಗವನ್ನು ತಿಳಿಯಬಹುದು. ಇದಕ್ಕೆ ನಿಮ್ಮ ವೋಟರ್ ಐಡಿ ಸಂಖ್ಯೆ ನೀಡಿದರೆ ಸಾಕು ಎಲ್ಲ ವಿವರ ಸಿಗಲಿದೆ.

ಮಾನಿಟರಿಂಗ್: ಮತದಾರರಿಗೆ ಯಾವುದೇ ತೊಂದರೆ ಇಲ್ಲದೆ ಮತದಾನ ಮಾಡಲು ಸಹಕಾರಿಯಾಗುವಂತೆ 400 ಮತದಾರರಿಗೆ ಒಂದು ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಈ ಮಾನಿಟರಿಂಗ್ ಆ್ಯಪ್ ಬಳಸಿಕೊಂಡು ಮತಗಟ್ಟೆಯಲ್ಲಿ ಎಷ್ಟು ಕ್ಯೂ ಇದೆ, ಯಾವ ಸಮಯದಲ್ಲಿ ಮತದಾನ ಮಾಡಬಹುದು ಎಂಬ ಬಗ್ಗೆ ಮಾಹಿತಿ ತಿಳಿಯಬಹುದಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ಆಯೋಗಕ್ಕೆ ಮಾಹಿತಿ ರವಾನೆ: ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ 28 ಲಕ್ಷ ರೂ. ಚುನಾವಣಾ ವೆಚ್ಚ ಅಸಮಂಜಸವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ವಿವಿಧ ರಾಜಕೀಯ ಪಕ್ಷಗಳು ಈ ಬಗ್ಗೆ ಮನವಿ ಮಾಡಿವೆ. ಕೇಂದ್ರ ಚುನಾವಣಾ ಆಯೋಗ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆÉ. ಆದರೆ ಚುನಾವಣಾ ವೆಚ್ಚ ಹೆಚ್ಚಳ ಮಾಡುವ ಅಧಿಕಾರ ನಮಗೆ ಇಲ್ಲ. ಇದನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ ಎಂದು ಸಂಜೀವ್‍ಕುಮಾರ್ ಹೇಳಿದರು.

ನೀತಿ ಸಂಹಿತೆ ಜಾರಿಯಾದ ನಂತರ ತೀರ್ಥಹಳ್ಳಿಯಲ್ಲಿ ಮೂರು ಕೋಟಿ ಹಣ ಸಿಕ್ಕಿತ್ತು. ಆದರೆ ಆ ಹಣವನ್ನು ಎರಡು ದಿನಗಳಾದ ಮೇಲೆ ದಾಖಲಾತಿ ತೋರಿಸಿ ವಾಪಸ್ ಪಡೆದಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂಜೀವ್‍ಕುಮಾರ್, ಈ ಬಗ್ಗೆ ಪೂರ್ಣ ವರದಿ ತರಿಸಿಕೊಂಡು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಭದ್ರತೆ: 3.56 ಲಕ್ಷ ಸಿಬ್ಬಂದಿ ಚುನಾವಣೆ ಭದ್ರತೆ ಕಾರ್ಯದಲ್ಲಿ ನಿರತರಾಗುವ ಜೊತೆಗೆ ಪೆÇಲೀಸ್ ಇಲಾಖೆಯು ಭದ್ರತೆಗೆ ಕೈ ಜೋಡಿಸಲಿದೆ.
ನಿಯಮ ಮೀರಿ ಧ್ವನಿವರ್ಧಕಗಳ ಬಳಕೆ, ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಪೆÇಲೀಸರು ಕ್ರಮವಹಿಸಲಿದ್ದಾರೆ. ಈ ಬಗ್ಗೆ ಆಯೋಗ ನಿರ್ದೇಶನ ನೀಡಿದೆ ಎಂದರು.

ಮಾಧ್ಯಮ ಸಂವಾದದಲ್ಲಿ ಹೆಚ್ಚುವರಿ ಚುನಾವಣಾಧಿಕಾರಿಗಳಾದ ಮಮತಾ, ಜಗದೀಶ್, ಉಜ್ವಲ್‍ಘೋಷ್, ಜಂಟಿ ಚುನಾವಣಾಧಿಕಾರಿಗಳಾದ ರಮೇಶ್, ರಾಘವೇಂದ್ರ, ಜಿಲ್ಲಾಧಿಕಾರಿ ದಯಾನಂದ್, ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನಕಾರ್ಯದರ್ಶಿ ಕಿರಣ್, ಬೆಂಗಳೂರು ವರದಿಗಾರರ ಕೂಟದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ