ರಾಷ್ಟ್ರೀಯ ಪಕ್ಷಗಳು ಟಿಕೆಟ್ ಹಂಚಿಕೆ ಮಾಡಲು ಒಡೆದಾಡುತ್ತಿವೆ – ಎಚ್.ಡಿ.ಕುಮಾರಸ್ವಾಮಿ

ಮೈಸೂರು, ಏ.14- ರಾಷ್ಟ್ರೀಯ ಪಕ್ಷಗಳು ಟಿಕೆಟ್ ಹಂಚಿಕೆ ಮಾಡಲು ಒಡೆದಾಡುತ್ತಿವೆ. ಇನ್ನೂ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಆದರೆ, ನಾವು ಈಗಾಗಲೇ ಟಿಕೆಟ್ ಅಂತಿಮಗೊಳಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪುರಭವನ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ಇನ್ನೂ ಯಾವುದೇ ಪಟ್ಟಿಯನ್ನು ಅಂತಿಮಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ಸಮೀಕ್ಷೆ ಏನಿದೆಯೋ ಅದು ತಲೆಕೆಳಗಾಗಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದ ಅವರು, ಜೆಡಿಎಸ್ ಕಿಂಗ್‍ಮೇಕರ್ ಅಲ್ಲ, ಕಿಂಗ್ ಆಗುತ್ತದೆ ಎಂದು ಹೇಳಿದರು.
ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ಜೆಡಿಎಸ್ ಪರ ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ತೆಲುಗು ಕನ್ನಡಿಗರ ಮತ ಕ್ರೋಢೀಕರಣಕ್ಕೆ ಅವರು ಪ್ರಚಾರ ನಡೆಸಲಿದ್ದಾರೆ. ಹಾಗೆಯೇ ಮಾಯಾವತಿ ಅವರು ಸಹ ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು.
ನನಗೂ ಮುಖ್ಯಮಂತ್ರಿಗಳಿಗೂ ಹೋಲಿಕೆ ಮಾಡಬೇಡಿ ಎಂದು ಹೇಳಿದ ಅವರು, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರ ನಡವಳಿಕೆಗೂ ನನಗೂ ಹೋಲಿಕೆ ಮಾಡಬೇಡಿ. ಸಿದ್ದರಾಮಯ್ಯನವರಿಗೂ ರಾಮನಗರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಅವರು ರಾಮನಗರ ಮತ್ತು ಚನ್ನಪಟ್ಟಣಕ್ಕೆ ಬಂದು ಒಂದು ತಿಂಗಳು ಕ್ಯಾಂಪ್ ಮಾಡಲಿ. ಆ ಎರಡು ಕ್ಷೇತ್ರಗಳಿಗೆ ನಾನು ಹೋಗದೆ ಇಲ್ಲಿ ಅವರೇನು ಮಾಡ್ತಾರೋ ಮಾಡಲಿ. ಅಲ್ಲಿ ನಾನೇ ಗೆಲ್ತೀನಿ ಎಂದು ಸವಾಲು ಹಾಕಿದರು.
ವರದಿಯೊಂದು ಹೇಳಿರುವ ಭವಿಷ್ಯ ನಿಜವಾಗುವುದಿಲ್ಲ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಪಾತ್ರ ಅಂತರ ವರದಿಯಲ್ಲಿ ಎಷ್ಟಿದೆ ಎಂಬ ಬಗ್ಗೆ ಇಂಚಿಂಚು ಮಾಹಿತಿ ನನ್ನ ಬಳಿ ಇದೆ ಎಂದು ಮಾರ್ಮಿಕವಾಗಿ ಹೇಳಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಎಚ್‍ಡಿಕೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಬರುತ್ತಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಚಾರ ಕೈಗೊಂಡಂತೆ ಇಲ್ಲಿಯೂ ಪ್ರಚಾರ ನಡೆಸುತ್ತಿದ್ದೇವೆ ಅಷ್ಟೇ. ನೂರು ಹಳ್ಳಿಗಳಿಗೆ ಹೋಗಲು ಸಮಯ ನಿಗದಿ ಮಾಡಿಕೊಂಡಿದ್ದೇವೆ ಎಂದ ಅವರು, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿಎಂ ಕೊಡುಗೆಗಿಂತ ನನ್ನ ಕೊಡುಗೆ ಹೆಚ್ಚಾಗಿದೆ. ಇದಕ್ಕೆ ಜಿ.ಟಿ.ದೇವೇಗೌಡರೇ ಕಾರಣ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ