ಸಂಜೆ ಕಾಂಗ್ರೆಸ್ ಮೊದಲ ಪಟ್ಟಿ, ರಾತ್ರಿ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ

ಬೆಂಗಳೂರು,ಏ.15

ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ಪ್ರಕ್ರಿಯೆ ಕಸರತ್ತು  ರಾಷ್ಟ್ರ ರಾಜಧಾನಿಯಲ್ಲಿ ಇಂದು ಕೂಡ ಮುಂದುವರಿದಿದ್ದು ಕಾಂಗ್ರೆಸ್ ಸಂಜೆ 3ಕ್ಕೆ ಹಾಗೂ ಬಿಜೆಪಿ ರಾತ್ರಿ 9ಕ್ಕೆ ತಮ್ಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

ಕಳೆದ ನಾಲ್ಕು ದಿನದಿಂದ ಪಟ್ಟಿ ಅಂತಿಮಗೊಳಿಸುವ ಕಸರತ್ತಿನಲ್ಲಿ ತೊಡಗಿರುವ ರಾಜ್ಯ ಹಾಗೂ ಕೇಂದ್ರ ಕಾಂಗ್ರೆಸ್ ನಾಯಕರು ಇಂದು ಒಂದೇ ಹಂತದಲ್ಲಿ ರಾಜ್ಯದ 224 ಕ್ಷೇತ್ರಗಳ ಅಭ್ಯರ್ಥಿಯ ಪಟ್ಟಿಯನ್ನು ಪ್ರಕಟಿಸಲಿದ್ದಾರೆ.

ಸದ್ಯ 10 ರಿಂದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಕ್ಲಿಷ್ಟಕರವಾಗಿ ಪರಿಣಮಿಸಿದ್ದು, ಎರಡು ದಿನದಿಂದ ಮೇಲಿಂದ ಮೇಲೆ ಸಭೆ ನಡೆಸಿ ಒಂದು ಅಂತಿಮ ತೀರ್ಮಾನಕ್ಕೆ ಬರಲಾಗುತ್ತಿದೆ. ಇಂದು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸಂಜೆ 3 ಗಂಟೆಗೆ ಹಮ್ಮಿಕೊಂಡಿರುವ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಭ್ಯರ್ಥಿಗಳ ಹೆಸರು ಘೋಷಿಸಲಿದ್ದಾರೆ.

ಇಂದು ಬೆಳಗ್ಗೆಯೇ ಕಾಂಗ್ರೆಸ್ ಪಕ್ಷದ ವಾರ್ ರೂಂನಲ್ಲಿ ಬೆಳಗ್ಗಿನಿಂದಲೇ ಸಭೆಯ ಮೇಲೆ ಸಭೆ ನಡೆಯುತ್ತಿದೆ. ಸಂಜೆ 3ಕ್ಕೆ ಸುದ್ದಿಗೋಷ್ಠಿ ನಡೆಸಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಪಾಲ್ಗೊಳ್ಳಲಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿ ಅಮೇಥಿ ಕ್ಷೇತ್ರದ ಪ್ರವಾಸ ಕೈಗೊಂಡಿರುವುದರಿಂದ ನಾಳೆಯಿಂದ ಅಲಭ್ಯರಾಗಲಿದ್ದಾರೆ. ಇದರಿಂದ ಇಂದೇ ಪಟ್ಟಿ ಅಂತಿಮಗೊಳಿಸಿ, ಪ್ರಕಟಿಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

ಇಂದು ರಾತ್ರಿ ಬಿಜೆಪಿ ಪಟ್ಟಿ:
ಇಂದು ರಾತ್ರಿ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದ್ದು, 80-90 ಮಂದಿ ಹೆಸರು ಪ್ರಕಟವಾಗುವ ನಿರೀಕ್ಷೆ ಹೊಂದಲಾಗಿದೆ. ಸಂಜೆ 6 ಗಂಟೆಗೆ ದಿಲ್ಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆಯಲಿದೆ. ಅದಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿನ್ನೆ ರಾತ್ರಿಯೇ ದಿಲ್ಲಿ ತಲುಪಿದ್ದಾರೆ. ಅದಾಗಲೇ ಚರ್ಚೆ ಆರಂಭವಾಗಿದ್ದು, ಇಂದು ರಾತ್ರಿಯೇ ಪಟ್ಟಿ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಟ್ಟಿ ಪ್ರಕಟವಾದ ನಂತರ ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆ ಮಾಡಲು ಬಿಜೆಪಿ ನಾಯಕರು ನಿರ್ಧರಿಸಿದ್ದರು. ಅಲ್ಲಿನ ಅಸಮಾಧಾನ, ಪ್ರಬಲ ಆಕಾಂಕ್ಷಿಗಳಿಗೆ ಟಿಕೆಟ್ ಕೈತಪ್ಪಿದರೆ ಉಂಟಾಗುವ ಅಸಮಾಧಾನ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ನಾಯಕರು ಚಿಂತಿಸಿದ್ದರು. ಆದರೆ ಪಟ್ಟಿ ಬಹುತೇಕ ಅಂತಿಮವಾಗಿದ್ದರಿಂದ ರಾತ್ರಿ ಪಟ್ಟಿ ಪ್ರಕಟಿಸಲಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ