ಬೆಂಗಳೂರು,ಏ.14-ಎರಡನೇ ಹಂತದ ಪಟ್ಟಿ ಬಿಡುಗಡೆಗೊಳಿಸುವ ಸಂಬಂಧ ಇಂದು ರಾತ್ರಿ ನವದೆಹಲಿಗೆ ತೆರಳಿ ವರಿಷ್ಠರ ಜೊತೆ ಚರ್ಚೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸಂಜೆ ತಾವು ಸೇರಿದಂತೆ ಕೆಲ ಮುಖಂಡರು ದೆಹಲಿಗೆ ತೆರಳಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದೇವೆ. ನಾಳೆ ಎಲ್ಲರು ಚರ್ಚಿಸಿ 2ನೇ ಹಂತದ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಅವರು ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೇರೆ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಏಕೈಕ ಗುರಿ. ಅದಕ್ಕಾಗಿ ಎಲ್ಲರೂ ತಮ್ಮ ಹಿತಾಸಕ್ತಿಗಳನ್ನು ಮರೆತು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದರು.
ಸಮೀಕ್ಷೆಗಳ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಜನರ ನಾಡಿಮಿಡಿತವನ್ನು ತಿಳಿದುಕೊಂಡು ಮಾತನಾಡುತ್ತಿದ್ದೇನೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಕೆಲವೇ ದಿನಗಳ ತನಕ ಕಾದು ನೋಡಿ ಎಂದರು.
ಅನೇಕ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿರುವುದರಿಂದ ನಮ್ಮ ಮನೆಗೆ ಆಕಾಂಕ್ಷಿಗಳು ಬಂದೇ ಬರುತ್ತಾರೆ. ಬಂದವರಿಗೆ ನಾವು ಟಿಕೆಟ್ ಖಾತ್ರಿ ನೀಡಲು ಸಾಧ್ಯವಿಲ್ಲ. ವರಿಷ್ಠರು ಅವರದೇ ಆದ ಸಮೀಕ್ಷೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ.ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಹೇಳಿದರು.
ಈಗಾಗಲೇ 73 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ. ಉಳಿದಿರುವ ಕ್ಷೇತ್ರಗಳಿಗೆ ಆದಷ್ಟು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು.
ನಾಳೆ 2ನೇ ಹಂತದ ಪಟ್ಟಿಯನ್ನು ವರಿಷ್ಠರು ಪ್ರಕಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಎಲ್ಲಿ ಪ್ರಚಾರ ಮಾಡಬೇಕು ಎಂಬುದನ್ನು ಚರ್ಚೆ ಮಾಡಿ ಅಂತಿಮಗೊಳಿಸಲಾಗುವುದು. ಪ್ರಚಾರಕ್ಕೆ ಕಡಿಮೆ ಅವಧಿ ಇರುವುದರಿಂದ ಇನ್ನು ಹೆಚ್ಚು ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಹೇಳಿದರು.