
ಬೆಂಗಳೂರು ಏ.14- ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳತ್ತಿರುವವರ ವಿರುದ್ಧ ಸಿಡಿದೆಳಬೇಕು ಇದರ ಬಗ್ಗೆ ಜಾಗೃತಿ ಮೂಡಿಸುವ ಸಂಕಲ್ಪ ಮಾಡಬೇಕಿದೆ ಎಂದು ಎಂಇಪಿ ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಅಹಮದ್ ಶಾಲಿ ಪ್ರತಿಪಾದಿಸಿದ್ದಾರೆ.
ಎಂಇಪಿ ರಾಜ್ಯ ಕಚೇರಿಯಲ್ಲಿ ಇಂದು ಜರುಗಿದ ಅಂಬೇಡ್ಕರ್ ಅವರ 127ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತ ಮಾಡುತ್ತಿರುವುದು ದೊಡ್ಡ ದುರಂತ. ಈ ಕೆಟ್ಟಚಾಳಿಯನ್ನು ಎಂಇಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಬದಲಾವಣೆ ಮಾಡಿ ತೋರಿಸಬೇಕಿದೆ ಎಂದರು.
ಎಂಇಪಿಯಿಂದ ಯಾರಿಗೆ ಟಿಕೆಟ್ ಕೊಟ್ಟರೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ವಜ್ರದ ಚಿನ್ನೆಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಕಿವಿಮಾತು ಹೇಳಿದರು. ರಾಜ್ಯ ಎಂಇಪಿ ಚುನಾವಣಾ ವೀಕ್ಷಕ ಮನುಸಿದ್ಧಾರ್ಥ ಮಾತನಾಡಿ, ಅಂಬೇಡ್ಕರ್ ಈ ದೇಶದ ಆಸ್ತಿಯಲ್ಲ, ವಿಶ್ವದ ಆಸ್ತಿ ಎಂದು ಗುಣಗಾನ ಮಾಡಿದರು.
ಎಂಇಪಿ ಪಕ್ಷದ ಮಹಿಳಾ ಘಟಕದ ಉಪಾದ್ಯಕ್ಷೆ ಅವನಿಕಾ ನಾಗರಾಜ್ ಮಾತನಾಡಿ, ಕೇವಲ ಮೂರು ತಿಂಗಳ ಅವಧಿಯಲ್ಲಿಯೇ ಎಂಇಪಿ ರಾಜ್ಯದಲ್ಲೇ ಭಾರೀ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಕೆಟ್ಟ ಆಡಳಿತ ಕೊನೆಯಾಗಿ ಮಹಿಳೆಯರು ನೆಮ್ಮದಿ, ಸ್ವಾಭಿಮಾನದ ಜೀವನ ನಡೆಸಬೇಕಾದರೆ ಪ್ರತಿ ಮನೆಮೆಯಲ್ಲೂ ವಜ್ರ ಬೆಳಗಬೇಕು ಎಂದು ಹೇಳಿದರು.
ಭೀಮಾ ಶಕ್ತಿ ಹೆಬ್ಬಾಳ ವೆಂಕಟೇಶ್ ಅವರು, ಅಂಬೇಡ್ಕರ್ ಇಲ್ಲದಿದ್ದರೆ ಏನಾಗುತ್ತಿತ್ತು ನಮ್ಮ ದೇಶ ಎಂತಾಗುತ್ತಿತ್ತು ನಮ್ಮ ಪಾಡು ಎಂಬ ಅಂಬೇಡ್ಕರ್ ಗೀತೆಗಳನ್ನು ಮನಮುಟ್ಟುವಂತೆ ಹಾಡಿದರು. ಎಂಇಪಿಯ ಜಿಲ್ಲಾ ಮತ್ತು ರಾಜ್ಯದ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.