ಗೋಲ್ಡ್ ಕೋಸ್ಟ್, ಏ.13-ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇಂದು ಭಾರತಕ್ಕೆ ಕಪ್ಪು ಚಿಕ್ಕೆಯ ಕಳಂಕ ಅಂಟಿದೆ. ಸ್ಪರ್ಧೆಯಲ್ಲಿ ಕಡ್ಡಾಯವಾಗಿರುವ ಸೂಜಿರಹಿತ ನೀತಿ(ನೋ ನೀಡಲ್ ಪಾಲಿಸಿ) ಉಲ್ಲಂಘನೆಗಾಗಿ ಭಾರತದ ರೇಸ್ ವಾಕರ್ ಕೆ.ಟಿ. ಇರ್ಫಾನ್ ಮತ್ತು ಟ್ರಿಪಲ್ ಜಂಪರ್ ವಿ.ರಾಕೇಶ್ ಬಾಬು ಅವರನ್ನು ಸಿಡಬ್ಲ್ಯುಜಿನಿಂದ ಮನೆಗೆ ಕಳುಹಿಸಲಾಗಿದೆ. ಆದರೆ ಇವರಿಬ್ಬರ ವಿರುದ್ಧ ಉದ್ದೀಪನ ಮದ್ದು ಸೇವನೆ ಆರೋಪಗಳಿಲ್ಲ.
ಶೂಟಿಂಗ್, ವೇಟ್ಲಿಫ್ಟಿಂಗ್, ಬಾಕ್ಸಿಂಗ್, ಕುಸ್ತಿ, ಟೆನಿಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾರತೀಯ ಪಟುಗಳು ಅದರಲ್ಲೂ ವನಿತೆಯರು ಉತ್ತಮ ಪ್ರದರ್ಶನ ತೋರಿ ಪದಕಗಳ ಬೇಟೆ ಮುಂದುವರಿಸಿರುವಾಗಲೇ ಈ ಬೆಳವಣಿಗೆ ಭಾರತಕ್ಕೆ ಅಪಕೀರ್ತಿ ತಂದಿದೆ.
ನೀತಿ ಉಲ್ಲಂಘನೆಯಲ್ಲಿ ದೋಷಿಗಳಾಗಿರುವುದರಿಂದ ರಾಕೇಶ್ ಬಾಬು ಮತ್ತು ಇರ್ಫಾನ್ ಥೋಡಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಲಾಗಿದೆ. ಅವರಿಬ್ಬರ ಮಾನ್ಯತೆಯನ್ನು ಏಪ್ರಿಲ್ 13, 2018ರ ಬೆಳಗ್ಗೆ 9.00 ಗಂಟೆಯಿಂದ ರದ್ದುಗೊಳಿಸಲಾಗಿದೆ. ಇವರನ್ನು ಕ್ರೀಡಾ ಗ್ರಾಮದಿಂದ ಹೊರಗೆ ಕಳುಹಿಸಲಾಗಿದೆ ಎಂದು ಸಿಡಬ್ಲ್ಯುಜಿ ಒಕ್ಕೂಟ ಅಧ್ಯಕ್ಷ ಲೂಯಿಸ್ ಮಾರ್ಟಿನ್ ಕಟು ಶಬ್ಧಗಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಇಬ್ಬರು ಅಥ್ಲೆಟ್ಗಳನ್ನು ಲಭ್ಯವಿರುವ ಮೊದಲ ವಿಮಾನದಲ್ಲೇ ಆಸ್ಟ್ರೇಲಿಯಾದಿಂದ ಸ್ವದೇಶಕ್ಕೆ ಕರೆಸಿಕೊಳ್ಳುವಂತೆ ಭಾರತದ ಡಿಡಬ್ಲ್ಯುಜಿ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ಇರ್ಫಾನ್ ಮತ್ತು ರಾಕೇಶ್ ವಿರುದ್ಧ ಉದ್ದೀಪನ ಮದ್ದು ಬಳಕೆಯಾಗಲಿ ಅಥವಾ ಸಿರಿಂಜ್ ಉಪಯೋಗಿಸಿದ ಬಗ್ಗೆಯಾಗಲಿ ಯಾವುದೇ ಆಪಾದನೆಗಳಿಲ್ಲ. ಆದರೆ ಇವರು ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸದೇ ಅತ್ಯಂತ ಬೇಜವಾಬ್ದಾರಿ ಮತ್ತು ಉಡಾಫೆಯಿಂದ ವರ್ತಿಸಿದ್ದಾರೆ. ಈ ಆರೋಪಗಳು ದೃಢಪಟ್ಟಿರುವುದರಿಂದ ಇವರನ್ನು ವಾಪಸ್ ಕಳುಹಿಸುವ ದೃಢ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.