
ಬೆಳಗಾವಿ, ಏ.13-ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಿನ್ನೆಯಿಂದ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಿನ್ನೆ ಧಾರವಾಡ ಮತ್ತು ಗದಗ ಜಿಲ್ಲೆ ಪ್ರವಾಸ ಮುಗಿಸಿ ಇಂದು ಗಡಿ ಜಿಲ್ಲೆ ಬೆಳಗಾವಿಗೆ ಆಗಮಿಸಿದರು.
ಈ ವೇಳೆ ಅವರು ಕಿತ್ತೂರಿನಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಚನ್ನಮ್ಮನ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಅರ್ಪಿಸಿದರು.
ನಂತರ ರಾಣಿ ಚನ್ನಮ್ಮನ ಬಲಗೈ ಭಂಟ ಹಾಗೂ ಬ್ರಿಟಿಷರಿಗೆ ಸಿಂಹಸಪ್ನವಾಗಿ ಕಾಡಿದ ವೀರ ಸಂಗೊಳ್ಳಿಯ ರಾಯಣ್ಣನ ಸ್ಮಾರಕವಿರುವ ಖಾನಾಪೂರ ತಾಲೂಕಿನ ನಂದಗಡಕ್ಕೆ ಭೇಟಿ ನೀಡಿ ರಾಯಣ್ಣನ ಸ್ಮಾರಕಕ್ಕೆ ಗೌರವ ಅರ್ಪಣೆ ಸಲ್ಲಿಸಿದರು.
ಅಮಿತ್ ಷಾ ಅವರು ಜನಾಸಾಮಾನ್ಯರ ಸಂಪರ್ಕ ಸಾಧಿಸಿದ್ದು ತೀರ ಅಪರೂಪ. ಅವರು ಆಯಾ ಸಮುದಾಯಗಳ ಮಠಮಾನ್ಯಗಳಿಗೆ ಭೇಟಿ ನೀಡಿ ಪೂಜೆ ಪುನಸ್ಕಾರಗಳ ಮೂಲಕ ಆ ಸಮುದಾಯಗಳನ್ನು ಒಲಿಸಿಕೊಳ್ಳಲು ಪ್ರಯತ್ನ ಮಾಡುತ್ತ ಬಂದಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದ ಸಂಕೇತವಾಗಿರುವ ವೀರ ರಾಣಿ ಚನ್ನಮ್ಮನ ಸ್ಮಾರಕ ಹಾಗೂ ಕುರುಬ ಸಮುದಾಯದ ನಾಯಕತ್ವದ ಸಂಕೇತವಾದ ವೀರ ಸಂಗೊಳ್ಳಿ ರಾಯಣ್ಣನ ಸ್ಮಾರಕ್ಕೆ ಭೇಟಿ ನೀಡುವುದರ ಮೂಲಕ ಆ ಸಮುದಾಯಗಳ ಒಲವು ಗಳಿಸಲು ಅಮಿತ್ ಷಾ ಅವರು ಮಾಡಿದ ರಾಜಕೀಯ ತಂತ್ರಗಾರಿಕೆ ಎಂಬುದು ಬಹಿರಂಗ ಸತ್ಯವಾಗಿದೆ.
ಗೋಕಾಕ್ನಲ್ಲಿ ಸಂಗೊಳ್ಳಿ ರಾಯಣ್ಣನ ವೃತ್ತದಿಂದ ಶೂನ್ಯ ಸಂಪಾದನ ಮಠದವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದು, ಗೋಕಾಕ ಜಾರಕಿಹೊಳ್ಳಿ ಸಹೋದರ ಪ್ರಭಾವಕ್ಕೆ ಒಳಗಾದ ಪ್ರದೇಶ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚುನಾಯಿತರಾದ ಕ್ಷೇತ್ರ. ಈ ಕ್ಷೇತ್ರದ ಮತಬೇಟೆಗೆ ಅಮಿತ್ ಶಾ ಅವರು ರೋಡ್ ಶೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗಬೇಕೆಂಬ ಉದ್ದೇಶ ಹೊಂದಿರುವ ಅಮಿತ್ ಶಾ ಅವರು ಜಿಲ್ಲೆಯ ಗಡಿ ಪ್ರದೇಶ ನಿಪ್ಪಾಣಿಯಲ್ಲಿ ಬೃಹತ್ ಮಹಿಳಾ ಸಮಾವೇಶ ನಡೆಸಿದರು. ಸಂಜೆ ಬೆಳಗಾವಿ ನಗರದ ನೆಹರು ಮೆಡಿಕಲï ಸಭಾಂಗಣದಲ್ಲಿ ನಗರದ ಕೆ.ಎಲï.ಇ. ವೈದ್ಯ ಕಾಲೇಜï ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.