ಚೆನ್ನೈ/ಬೆಂಗಳೂರು,ಏ.13-ರಕ್ಷಣಾ ಸಚಿವಾಲಯದ ಸಾರ್ವಜನಿಕ ವಲಯದ ಸಂಸ್ಥೆಯಾದ ಬಿಇಎಂಎಲ್ ಅತ್ಯಾಧುನಿಕ, ಸರ್ವಋತು ಮತ್ತು ಕಠಿಣ ಕಾರ್ಯ ಕ್ಷಮತೆಯ ಬುಲೆಟ್ ಪ್ರೂಫ್(ಗುಂಡು ಪ್ರತಿರೋಧಕ) ವಾಹನ ಅನಾವರಣಗೊಳಿಸಿದೆ.
ಚೆನ್ನೈ ಹೊರವಲಯದಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್ ಪೆÇೀ-2018 ಪ್ರದರ್ಶನದಲ್ಲಿ ಮಧ್ಯಮ ಬುಲೆಟ್ ಪ್ರೂಫ್ 4*4(ಎಂಬಿಪಿವಿ 4*4) ವಾಹನವನ್ನು ಅನಾವರಣಗೊಳಿಸಲಾಗಿದೆ. ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪಕ್ ಕುಮಾರ್ ಹೋಟಾ ಅತ್ಯಧಿಕ ಕಾರ್ಯಕ್ಷಮತೆಯ ಈ ವಾಹನವನ್ನು ಅನಾವರಣಗೊಳಿಸಿದರು.
ವಿವಿಧೋದ್ದೇಶ ಕಾಯ ನಿರ್ವಹಣೆಗೆ ನೆರವಾಗುವಂತೆ ಈ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಬಲ ಬಾಂಬ್ ಸ್ಫೋಟ ಅಥವಾ ಗುಂಡುಗಳ ದಾಳಿಯನ್ನು ಸಮರ್ಥವಾಗಿ ತಡೆದುಕೊಳ್ಳುವ ಅಗಾಧ ಸಾಮಥ್ರ್ಯವನ್ನು ಈ ವಾಹನ ಹೊಂದಿದೆ.
ಸೇನಾ ಕಾರ್ಯಾಚರಣೆ ಸೇರಿದಂತೆ ನೈಸರ್ಗಿಕ ವಿಕೋಪ ನಿರ್ವಹಣೆ ಕಾರ್ಯಾಚರಣೆಗಳಲ್ಲೂ ಈ ವಾಹನವನ್ನು ಬಳಸಬಹುದಾಗಿದೆ.
ಗುಂಡಿನ ದಾಳಿ, ಗ್ರೇನೆಡ್ ಆಕ್ರಮಣ, ಬೆಂಕಿ ಮೊದಲಾದ ಅಪಾಯಕಾರಿ ಸನ್ನಿವೇಶಗಳಿಂದ ವಾಹನದ ಒಳಗಿರುವವರಿಗೆ ಇದು ರಕ್ಷಣೆ ಒದಗಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಕ್ ಇಂಡಿಯಾ ಯೋಜನೆಯಡಿ ಸಂಪೂರ್ಣ ದೇಶೀಯ ತಂತ್ರಜ್ಞಾನ ಬಳಸಿ ಈ ಅತ್ಯಾಧುನಿಕ ವಾಹನವನ್ನು ನಿರ್ಮಿಸಲಾಗಿದೆ ಎಂದು ದೀಪಕ್ ಕುಮರ್ ಹೋಟಾ ತಿಳಿಸಿದ್ದಾರೆ.