27 ವಿಧಾನಸಭಾ ಕ್ಷೇತ್ರಗಳಲ್ಲಿ ಕೇಂದ್ರೀಕರಿಸಿದ್ದ ಶಾಸಕರ ಮೌಲ್ಯಮಾಪನ ಬಿಡುಗಡೆ

ಬೆಂಗಳೂರು, ಏ.13- ಬೆಂಗಳೂರು ರಾಜಕೀಯ ಕಾರ್ಯ ಸಮಿತಿ(ಬಿ ಪ್ಯಾಕ್) ವತಿಯಿಂದ ನಗರದ 27 ವಿಧಾನಸಭಾ ಕ್ಷೇತ್ರಗಳಲ್ಲಿ ಕೇಂದ್ರೀಕರಿಸಿದ್ದ ಶಾಸಕರ ಮೌಲ್ಯಮಾಪನವನ್ನು ಪ್ರೆಸ್‍ಕ್ಲಬ್‍ನ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.

ನಂತರ ಮಾತನಾಡಿದ ಬಿ ಪ್ಯಾಕ್‍ನ ಉಪಾಧ್ಯಕ್ಷ ಪಿ.ವಿ.ಮೋಹನ್‍ದಾಸ್ ಪೈ, ಚುನಾಯಿತ ಪ್ರತಿನಿಧಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಬಿ ಪ್ಯಾಕ್ ನಾಗರಿಕರನ್ನು ಸಂಪರ್ಕಿಸಿ ಮೌಲ್ಯಮಾಪನವನ್ನು ಸಿದ್ಧಪಡಿಸಿದೆ. ನಗರದ ಹಲವಾರು ಕ್ಷೇತ್ರ ಪ್ರಗತಿಶೀಲ ನಗರವಾಗಿದ್ದರೂ ಸಹ ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನ ನಡೆದ ನಗರವಾಗಿದೆ.

2008ರಲ್ಲಿ ಶೇ.47.22ರಷ್ಟು , 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ.58.27ರಷ್ಟು ಮತದಾನವಾಗಿದೆ. ಮೇ 12ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ನಗರದ ನಾಗರಿಕರು ಹೆಚ್ಚು ಸಂಖ್ಯೆಯಲ್ಲಿ ಮತ ಚಲಾಯಿಸುವ ಮೂಲಕ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯುತ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಬಿ ಪ್ಯಾಕ್‍ನ ಅಧ್ಯಯನದ ಸಾರಾಂಶವೆಂದರೆ, ಶಾಸಕರ ಕಾರ್ಯವೈಖರಿಯಲ್ಲಿ ಒಟ್ಟು 22 ಶಾಸಕರಲ್ಲಿ 9 ಶಾಸಕರು ಮಾತ್ರ ಶೇ.75ರಷ್ಟು ಅಂಕ ಗಳಿಸಿದರೆ, 8 ಶಾಸಕರು ಶೇ.50ರಷ್ಟು ಅಂಕ ಪಡೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ್ ಮಾತ್ರ ಶೇ.96ರಷ್ಟು ವಿಧಾನಸಭಾ ಕಲಾಪಗಳಲ್ಲಿ ಭಾಗವಹಿಸಿದ್ದಾರೆ. 19 ಶಾಸಕರು ಶೂನ್ಯ ಅಪರಾಧಗಳನ್ನು ಹೊಂದಿದ್ದು, ಇಬ್ಬರು ಶಾಸಕರು ಮಾತ್ರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಮೂವರು ಶಾಸಕರು ಸ್ನಾತಕೋತ್ತರ ಪದವೀಧರರಾಗಿದ್ದರೆ, 17 ಶಾಸಕರು ಪದವೀಧರರಾಗಿದ್ದು, ಐದು ಶಾಸಕರು 10ನೆ ತರಗತಿ, ಇಬ್ಬರು ಶಾಸಕರು ಪಿಯುಸಿ ವಿದ್ಯಾಭ್ಯಾಸ ಪಡೆದಿದ್ದಾರೆ. ಈ ಎಲ್ಲ ಶಾಸಕರು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ನಗರ ಸಚಿವರ ಮೌಲ್ಯಮಾಪನದಲ್ಲಿ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಕೆ.ಜೆ.ಜಾರ್ಜ್ ಶೇ.87ರಷ್ಟು ಅಂಕ ಪಡೆದಿದ್ದರೆ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೃಷ್ಣಭೆರೇಗೌಡ ಶೇ.84ರಷ್ಟು, ಬಿಟಿಎಂ ಬಡಾವಣೆಯ ರಾಮಲಿಂಗಾರೆಡ್ಡಿ ಶೇ.76ರಷ್ಟು, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ರೋಷನ್‍ಬೇಗ್ ಶೇ.64ರಷ್ಟು, ವಿಜಯನಗರದ ಎಂ.ಕೃಷ್ಣಪ್ಪ ಶೇ.51ರಷ್ಟು ಅಂಕ ಗಳಿಸಿದ್ದಾರೆ ಎಂದು ತಿಳಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ