ಬೆಂಗಳೂರು, ಏ.12- ಬಂಡವಾಳ ರಚನೆಗೆ ಪೂರಕವಾಗಿ ದೀರ್ಘಕಾಲೀನ ಸಾಲ ಹೆಚ್ಚಳ, ಗ್ರಾಮೀಣ ಹಣಕಾಸು ಸಂಸ್ಥೆಗಳಿಗೆ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಕೆಗೆ ನೆರವು, ನೀರಾವರಿ ಯೋಜನೆ ವ್ಯಾಪ್ತಿ ವಿಸ್ತರಣೆ, ನೀರಾವರಿ ದಕ್ಷತೆ ಮತ್ತು ಗ್ರಾಮೀಣ ವಸತಿ ಸೌಲಭ್ಯಗಳ ಗಣನೀಯ ಪ್ರಮಾಣದ ಹೆಚ್ಚಳ ಮಾಡುವ ಜವಾಬ್ದಾರಿಯನ್ನು ನಬಾರ್ಡ್ 2017-18 ನೇ ಸಾಲಿನಲ್ಲಿ ಕಾರ್ಯರೂಪಕ್ಕೆ ತಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ.ಹರೀಶ್ ಕುಮಾರ್ ಭನ್ವಾಲ ತಿಳಿಸಿದ್ದಾರೆ.
2017-18 ನೇ ಸಾಲಿನ ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿ ಮಾತನಾಡಿದ ಅವರು, ಈ ಸಾಲಿನಲ್ಲಿ 10 ಲಕ್ಷ ಕೋಟಿ ರೂ.ವರೆಗೆ ಕೃಷಿ ಸಾಲ ನೀಡುವ ಗುರಿ ಹೊಂದಲಾಗಿದ್ದು, ಆದರೆ, ಇದರ ಪ್ರಮಾಣ 10.46 ಲಕ್ಷ ಕೋಟಿ ರೂ.ಗೆ ತಲುಪಿದ್ದರಿಂದ ನಿರೀಕ್ಷೆಗೂ ಮೀರಿದ ಗುರಿ ಸಾಧಿಸಲಾಗಿದೆ ಎಂದು ವಿವರಿಸಿದರು.
ನಬಾರ್ಡ್ ದೀರ್ಘಕಾಲದ ಸಾಲದ ರೀಫೈನಾನ್ಸ್ ವಿಭಾಗದಲ್ಲಿ ಶೇ.17 ರಷ್ಟು ಪ್ರಗತಿ ಸಾಧಿಸಿದ್ದು, 1,22,688 ಕೋಟಿ ರೂ.ಗಳ ಸಾಲ ನೀಡಿದೆ.
2017- 18 ನೇ ಸಾಲಿನಲ್ಲಿ ಫೆ. 28ರ ವೇಳೆಗೆ 10.46 ಲಕ್ಷ ಕೋಟಿ ರೂ.ಗಳ ಕೃಷಿ ಸಾಲ ವಿತರಿಸಲಾಗಿದೆ. ಅದೇ ರೀತಿ ಪುನರ್ ಸಾಲ ವಿತರಣೆಯಲ್ಲಿ ಒಟ್ಟು 1,45,061 ಕೋಟಿ ರೂ. ಸಾಲ ನೀಡಿದ್ದು, ಈ ಪೈಕಿ ದೀರ್ಘಾವಧಿ ಸಾಲದ ಮೊತ್ತ 65,240 ಕೋಟಿ ಆದರೆ, ಅಲ್ಪಾವಧಿ ಸಾಲದ ಮೊತ್ತ 79,821 ಕೋಟಿ ಯಾಗಿದ್ದು, ಒಟ್ಟಾರೆ ಶೇ.14 ರಷ್ಟು ಹೆಚ್ಚಳ ಸಾಧಿಸಿದೆ ಎಂದರು.
ಸಣ್ಣ ಹಣಕಾಸು ಬ್ಯಾಂಕ್ಗಳಿಗೆ 3900 ಕೋಟಿ ರೂ.ಗಳ ಸಾಲ ನೀಡಿದ್ದರೆ, 2794 ಕೋಟಿ ರೂ.ಗಳನ್ನು ಎನ್ಬಿಎಫ್ಸಿ/ಎನ್ಬಿಎಫ್ಸಿ-ಎಂಎಫ್ಐಗಳಿಗೆ ನೀಡಿದೆ. ಗ್ರಾಮೀಣ ಭಾಗದಲ್ಲಿನ ಮೂಲ ಸೌಕರ್ಯಗಳ ಯೋಜನೆಗಳಿಗೆ ನಬಾರ್ಡ್ ಕಳೆದ ನಾಲ್ಕು ವರ್ಷಗಳಿಂದ ಆರ್ಐಡಿಎಫ್ ಮತ್ತು ಎಲ್ಟಿಐಎಫ್ ಅಡಿ ಈ ವರ್ಷ 1,30,509 ಕೋಟಿ ರೂ. ಸಾಲವನ್ನು ನೀಡಿದೆ. ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ (ಎನ್ಆರ್ಐಡಿಎ) 9,000 ಕೋಟಿ ರೂ. ಸಾಲ ನೀಡಿದೆ. 2017-18 ನೇ ಸಾಲಿನಲ್ಲಿ ಪ್ರಾಧಿಕಾರಕ್ಕೆ 7,329 ಕೋಟಿ ರೂ. ಸಾಲ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು.
ಆರ್ಥಿಕ ಸೇರ್ಪಡೆ ಮತ್ತು ನಬಾರ್ಡ್:
2017-18 ನೇ ಸಾಲಿನಲ್ಲಿ ಸಹಕಾರ ಬ್ಯಾಂಕ್ಗಳು ಡಿಜಿಟಲ್ ಬ್ಯಾಂಕಿಂಗ್ಗೆ ಹೆಚ್ಚಿನ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ನಬಾರ್ಡ್ ಜಾರಿಗೆ ತಂದಿರುವ ರೂಪೇ ಕಿಸಾನ್ ಕಾರ್ಡ್(ಆರ್ಕೆಸಿ)ಗಳನ್ನು 350 ಸಹಕಾರ ಬ್ಯಾಂಕ್ಗಳು ವಿತರಿಸಿವೆ.
ಇದಲ್ಲದೆ, ಆರ್ಥಿಕ ಸಾಕ್ಷರತೆ ಶಿಬಿರಗಳು, ಎಟಿಎಂ ವ್ಯಾನ್ಗಳ ಮೂಲಕ ಬ್ಯಾಂಕಿಂಗ್ ತಂತ್ರಜ್ಞಾನಗಳ ತಿಳುವಳಿಕೆ, ಆರ್ಥಿಕ ಸಾಕ್ಷರತೆ ಕೇಂದ್ರಗಳ ಸ್ಥಾಪನೆ ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಇಶಕ್ತಿ ಮೂಲಕ ಡಿಜಿಟಲ್:
ಸ್ವಸಹಾಯ ಗುಂಪುಗಳನ್ನು ಡಿಜಿಟಲೀಕರಣ ಮತ್ತು ಇಶಕ್ತಿ ಯೋಜನೆಯನ್ನು ದೇಶದ 100 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ಮಾ. 31 ರ ವೇಳೆಗೆ 54,600 ಗ್ರಾಮಗಳ ಒಟ್ಟು 3.5 ಲಕ್ಷ ಸ್ವಸಹಾಯ ಗುಂಪುಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, 3.8 ದಶಲಕ್ಷ ಕುಟುಂಬಗಳನ್ನು ತಲುಪಿದೆ.
ಇದರೊಂದಿಗೆ ಹಾಸಿರು ಯೋಜನೆ ಜಿಸಿಎಫ್, ಎಎಫ್ ಮತ್ತು ಎನ್ಎಸ್ಸಿಸಿಸಿಯಂತಹ ಫಂಡಿಂಗ್ ಪದ್ಧತಿಗಳಿಗೆ ಹಣ ಬಿಡುಗಡೆ, ಪಂಜಾಬ್ ಮತ್ತು ಹರ್ಯಾಣದಲ್ಲಿ ಬೆಳೆ ಉಳಿಕೆ ನಿರ್ವಹಣೆ, ಸೋಲಾರ್ ಟಾಪ್ ಅಳವಡಿಕೆ, ಅಂತರ್ಜಲ ಮಟ್ಟ ಹೆಚ್ಚಿಸುವುದ ಮತ್ತು ಸೋಲಾರ್ ಪಂಪಿಂಗ್ ಸಿಸ್ಟಮ್ ನಂತಹ ಹಲವಾರು ಯೋಜನೆಗಳಿಗೆ ನಬಾರ್ಡ್ ಹಣ ವಿನಿಯೋಗಿಸಿದೆ.
ಕುಡಿಯುವ ನೀರು ಕೊರತೆ ಎದುರಿಸುತ್ತಿರುವ ದೇಶದ 250 ಜಿಲ್ಲೆಗಳ 1,01,569 ಹಳ್ಳಿಗಳಲ್ಲಿ ನಬಾರ್ಡ್ ದಿನವಿಡೀ ಕುಡಿಯುವ ನೀರಿನ ಸದ್ಬಳಕೆ ಕುರಿತು ಅಭಿಯಾನವನ್ನು ಕೈಗೊಂಡಿದೆ.