ಯುವ ಕಾಂಗ್ರೆಸ್ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಡೊದಿರುವ ಬಗ್ಗೆ ಕೆಲವೆಡೆ ಅಸಮಾಧಾನ

ಮಂಗಳೂರು,ಏ.12- ಯುವ ಕಾಂಗ್ರೆಸ್ ನಾಯಕರನ್ನು ಓಲೈಸುವ ತಂತ್ರಗಾರಿಕೆ ಮೊದಲಿನಿಂದಲೂ ನಡೆಯುತ್ತಿದ್ದರೂ ಅವರಿಗೆ ಸೂಕ್ತ ಪ್ರಾತಿನಿಧ್ಯ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಡೊದಿರುವ ಬಗ್ಗೆ ಕೆಲವೆಡೆ ಅಸಮಾಧಾನ ಉಂಟಾಗಿದೆ.

ಕರಾವಳಿ ಭಾಗದಲ್ಲಿ ಪ್ರಬಲವಾಗಿರುವ ಕೇಸರಿ ಪಡೆಯನ್ನು ಎದುರಿಸಲು ಕಾಂಗ್ರೆಸ್‍ನ ನಿಷ್ಠಾವಂತ ಯುವ ಪಡೆಗೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದಿದೆ.
ಸ್ವತಃ ಎ ಐಸಿಸಿ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರು ಯುವ ಕಾಂಗ್ರೆಸ್‍ನ ಕೆಲ ನಾಯಕರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಅದರಂತೆ ಕೆಲವರು ಅದನ್ನೇ ನೆಚ್ಚಿಕೊಂಡು ಪ್ರಚಾರ ಕಾರ್ಯಕ್ಕೆ ಧುಮುಕಿದ್ದಾರೆ.

ಜೈನಕಾಶಿ ಎಂದೇ ಬಿಂಬಿತವಾಗಿರುವ ಮೂಡುಬಿದರೆ ಕ್ಷೇತ್ರದಲ್ಲಿ ಪ್ರಸ್ತುತ ಶಾಸಕರಾಗಿರುವ ಮಾಜಿ ಸಚಿವ ಅಭಯ್ ಚಂದ್ರ ಜೈನ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಯುವ ಕಾಂಗ್ರೆಸ್‍ನ ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲಾಧ್ಯಕ್ಷ ಮಿಥುನ್ ರೈಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.

ಸ್ವತಃ ಅಭಯ್ ಚಂದ್ರ ಜೈನ್ ಅವರೇ ಮಿಥುನ್ ರೈ ಪರವಾಗಿ ನಿಂತಿರುವುದರಿಂದ ಬಹುತೇಕ ಇವರೇ ಸ್ಫರ್ಧಿಸುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಬರುವ ಭಾನುವಾರದೊಳಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ದೆಹಲಿಯಲ್ಲೂ ಕೂಡ ಭಾರೀ ಕಸರತ್ತು ನಡೆಯುತ್ತಿದೆ.

ಈಗಾಗಲೇ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾಗಿರುವ ಮಿಥುನ್ ರೈಗೆ ಟಿಕೆಟ್ ನೀಡಬೇಕೆಂದು ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯರಿಂದ ಹಾಗೂ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಿ ಅಳೆದು, ತೂಗಿ ಟಿಕೆಟ್ ಹಂಚಿಕೆಗೆ ನಾಯಕರು ತೊಡಗಿದ್ದಾರೆ.

ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಕೂಡ ಟಿಕೆಟ್‍ಗೆ ಲಾಬಿ ನಡೆಸುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಅವರನ್ನು ಬೇರೆ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಯುವ ಕಾಂಗ್ರೆಸ್‍ನಿಂದ ಮಿಥುನ್ ರೈ ಹೆಸರು ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿದೆ. ಇದರನ್ವಯ ಯುವ ಸಮುದಾಯವನ್ನು ಸೆಳೆಯುವ ತಂತ್ರಗಾರಿಕೆ ಕೂಡ ನಡೆಯುತ್ತಿದೆ.

ಕೇವಲ ಬಂಟಿಂಗ್, ಬ್ಯಾನರ್‍ಗಳನ್ನು ಕಟ್ಟಿ, ಸಭೆ ಸಮಾರಂಭಗಳಲ್ಲಿ ಪಕ್ಷದ ಬಾವುಟ ಹಿಡಿದು ಪಕ್ಷ ಸಂಘಟಿಸುವುದು ಬೇಡ ಬದಲಿಗೆ ಯುವ ಕರನ್ನು ಸಂಘಟಿಸಲು ಕಾಂಗ್ರೆಸ್ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯ ಕೇಳಿಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ