ಚೆನ್ನೈ,ಏ.12
ರಕ್ಷಣಾ ಇಲಾಖೆಯ ಡಿಫೆನ್ಸ್ ಎಕ್ಸ್’ಪೋ-2018 ಪ್ರದರ್ಶನವನ್ನು ಉದ್ಘಾಟಿಸುವ ಸಲುವಾಗಿ ಚೆನ್ನೈಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.
ಚೆನ್ನೈನ ವಿಮಾನ ನಿಲ್ದಾಣಕ್ಕೆ ಮೋದಿಯವರು ಆಗಮಿಸುತ್ತಿದ್ದಂತೆಯೇ ಪ್ರಯಾಣಿಕರ ಸೋಗಿನಲ್ಲಿದ್ದ ಕೆಲ ಪ್ರತಿಭಟನಾಕಾರರು ಕಪ್ಪು ಬಾವುಟವನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ಮೋದಿ ವಿರುದ್ಧ ಗೋ ಬ್ಯಾಕ್ ಮೋದಿ ಎಂದು ಘೋಷಣಾ ವಾಕ್ಯಗಳನ್ನು ಕೂಗಿದ್ದಾರೆಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ 9.30ರ ಸುಮಾರಿಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ತಲುಪಿದ ಮೋದಿಯವರು ಡಿಫೆನ್ಸ್ ಎಕ್ಸ್’ಪೋ-2018 ಕಾರ್ಯಕ್ರಮ ಉದ್ಘಾಟನಾ ಸ್ಥಳಕ್ಕೆ ತೆರಳಲು ರಸ್ತೆ ಮಾರ್ಗವನ್ನು ಬಳಸದೆಯೇ ಹೆಲಿಕಾಪ್ಟರ್ ಮೂಲತ ತೆರಳಿದರು.
ಚೆನ್ನೈ ವಿಮಾನ ನಿಲ್ದಾಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರು ಕೆಲ ದೂರ ನಡೆದುಹೋಗಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದರು. ಈ ವೇಳೆ ನೂರಾರು ಪ್ರತಿಭಟನಾಕಾರರು ಕಪ್ಪು ಬಾವುಟನ್ನು ಪ್ರದರ್ಶಿಸಿದ್ದಾರೆ. ಮೋದಿಯವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಚಿತ್ರ ನಿರ್ದೇಶಕ ಭರತಿರಾಜ, ವೆಟ್ರಿಮರನ್, ಗೌತಮ್ ಮತ್ತು ಅಮಿರ್ ಸೇರಿದಂತೆ ಇನ್ನತರೆ ಪ್ರತಿಭಟನಾಕಾರರನ್ನು ಕೂಡಲೇ ಪೊಲೀಸರು ಬಂಧನಕ್ಕೊಳಪಡಿಸಿದರು.
ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಆದೇಶದಂತೆ ಮಾ.29ರಂದು ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡದೇ ಮತ್ತಷ್ಟು ಕಾಲಾವಕಾಶವನ್ನು ಕೇಳಿದ್ದನ್ನು ಖಂಡಿಸಿ ತಮಿಳುನಾಡು ಜನತೆ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಈಗಾಗಲೇ ಚೆನ್ನೈನಲ್ಲಿ ನಡೆಯಬೇಕಿದ್ದ ಎಲ್ಲಾ ಐಪಿಎಲ್ ಪಂದ್ಯಗಳನ್ನೂ ಬೇರೆ ರಾಜ್ಯಗಳಿಗೆ ಸ್ಥಳಾಂತರ ಮಾಡಲಾಗಿದೆ.