ತುಮಕೂರು, ಏ.12- ಇಪ್ಪತ್ತು ವರ್ಷಗಳ ಕಾಲ ಶಾಸಕರು ಮತ್ತು ಸಚಿವರಾಗಿ ಕೆಲಸ ಮಾಡಿದ ಸೊಗಡು ಶಿವಣ್ಣ ಸೇರಿದಂತೆ ಬಿಜೆಪಿಯ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷರು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿರುವ ಮುಖಂಡರು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಪಂಚಾಕ್ಷರಯ್ಯ ಮಾತನಾಡಿ, ನಾವು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಯಾಗುತ್ತಿದೆ. ರಾಜಕೀಯ ಆದರ್ಶಗಳನ್ನು ನಾವು ಕಲಿತಿದ್ದೇವೆ. ಇಂತಹ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕರಕ್ಕೆ ಬರಬೇಕೆಂಬುದು ನಮ್ಮ ಹೆಬ್ಬಯಕೆಯಾಗಿದೆ ಎಂದು ಹೇಳಿದರು.
ತಾಲ್ಲೂಕು, ನಗರ ಹಾಗೂ ಜಿಲ್ಲೆಯಲ್ಲಿ ಸುಮಾರು 45 ವರ್ಷಗಳ ಕಾಲ ಫುಟ್ಪಾತ್ನಲ್ಲಿ ಕಡ್ಲೆಪುರಿ ತಿಂದು ಪಕ್ಷ ಸಂಘಟಿಸಿದ್ದೇವೆ. ಆದರೆ, ಕಾಂಗ್ರೆಸ್ನಿಂದ ಬಿಜೆಪಿಗೆ ವಲಸಿಗರಾಗಿ ಬಂದ ಹಾಲಿ ಅಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಂಸದ ಜಿ.ಎಸ್.ಬಸವರಾಜ್ ಅವರಿಂದ ಮೂಲ ಬಿಜೆಪಿ ಕಾರ್ಯಕರ್ತರಿಗೆ ಧಕ್ಕೆಯಾಗಿದೆ. ನಮ್ಮನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಂಸದ ಜಿ.ಎಸ್.ಬಸವರಾಜು ಅವರ ಪುತ್ರ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಟಿಕೆಟ್ ಕೊಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಸೊಗಡು ಶಿವಣ್ಣ ಅವರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೊಗಡು ಶಿವಣ್ಣ ಜೆಡಿಎಸ್ ಹೋಗುತ್ತಾರಾ ಎಂಬ ವರದಿಗಾರರ ಪ್ರಶ್ನೆಗೆ ಈ ವಿಷಯ ನನಗೆ ಗೊತ್ತಿಲ್ಲ. ಆದರೆ, ಸೊಗಡು ಶಿವಣ್ಣ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆ ಎಂದು ಪಂಚಾಕ್ಷರಯ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಲಕ್ಷ್ಮೀನರಸಿಂಹರಾಜು, ಬನಶಂಕರಿ ಬಾಬು, ಶಾಂತರಾಜು, ಬಿ.ಕೆ.ಬಸವರಾಜ್, ನವೀನ್ಕುಮಾರ್, ಹುಮಾಯಾನ್ಚಾಂದ್ಪಾಷ ಮತ್ತಿತರರು ಪಂಚಾಕ್ಷರಯ್ಯ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್ಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು.