ಬೆಂಗಳೂರು, ಏ.12- ರಾಜ್ಯದ ಕಾರಾಗೃಹಗಳಲ್ಲಿ ಇರುವ ಬಂಧಿಗಳ ಕೂಲಿ ದರವನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ನೂರು ರೂ.ನಿಂದ 160ವರೆಗೂ ಕೂಲಿ ದರವನ್ನು ಹೆಚ್ಚಳ ಮಾಡಲಾಗಿದೆ. ಕಾರಾಗೃಹಗಳಲ್ಲಿ ದಾಖಲಾಗಿ ಕೂಲಿ ಪಡೆಯುವ ಬಂಧಿಗಳನ್ನು ನಾಲ್ಕು ಪ್ರವರ್ಗಗಳನ್ನಾಗಿ ವಿಂಗಡಣೆ ಮಾಡಲಾಗಿದೆ.
ತರಬೇತಿ ಕೆಲಸಗಾರ ಬಂಧಿ (ಅಕುಶಲ)ಗೆ ನೀಡಲಾಗುತ್ತಿದ್ದ ಕೂಲಿ ದರವನ್ನು 70ರೂ.ನಿಂದ 175ರೂ.ಗೆ ಹೆಚ್ಚಿಸಲಾಗಿದೆ. 75ರೂ. ನಗದು ರೂಪದಲ್ಲಿ ನೀಡಲಾಗುತ್ತದೆ.
ಅರೆಕುಶಲ ಬಂಧಿಗಳಿಗೆ 200ರೂ. ಕೂಲಿ ನೀಡಲಿದ್ದು, ಅದರಲ್ಲಿ ನೂರು ರೂ. ನಗದು ರೂಪದಲ್ಲಿ ನೀಡಲಾಗುತ್ತದೆ. ಕುಶಲ ಬಂಧಿಗೆ ನೀಡಲಾಗುತ್ತಿದ್ದ ಕೂಲಿಯನ್ನು 80ರೂ.ನಿಂದ 225ರೂ.ಗೆ ಹೆಚ್ಚಿಸಲಾಗಿದ್ದು, 125ರೂ.ವನ್ನು ನಗದು ರೂಪದಲ್ಲಿ ನೀಡಲಾಗುತ್ತದೆ.
ಹೆಚ್ಚಿನ ಕುಶಲ ಹೊಂದಿರುವ ಬಂಧಿಗಳಿಗೆ 90ರೂ.ನಿಂದ 250ರೂ.ಗೆ ಕೂಲಿ ಹೆಚ್ಚಿಸಿದ್ದು, 150ರೂ. ನಗದು ರೂಪದಲ್ಲಿ ನೀಡಲಾಗುತ್ತದೆ. ಈ ನಾಲ್ಕೂ ವರ್ಗಗಳ ಬಂಧಿಗಳಿಗೆ ಕೂಲಿ ಹಣದಲ್ಲಿ 100ರೂ. ಊಟ, ಬಟ್ಟೆ ವೆಚ್ಚಕ್ಕಾಗಿ ಬಳಸಲಾಗುತ್ತದೆ.
ಎಂಟು ಗಂಟೆಗಳ ಕಾಲ ಬಂಧಿ ಮಾಡುವ ಕೆಲಸಕ್ಕೆ ಈ ಕೂಲಿಯನ್ನು ನಿಗದಿಪಡಿಸಿ ಪರಿಷ್ಕರಿಸಲಾಗಿದೆ. ಮಹಿಳಾ ಮತ್ತು ಪುರುಷ ಬಂಧಿಗಳ ನಡುವೆ ಯಾವುದೇ ತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡುವ ಷರತ್ತು ವಿಧಿಸಲಾಗಿದೆ.
ಕೂಲಿ ಹಣವನ್ನು ಕಾರಾಗೃಹದ ನಿಯಮಾನುಸಾರ ಬಂಧಿಗಳ ಬ್ಯಾಂಕ್ ಖಾತೆಗೆ ಪಾವತಿಸಬೇಕು. ಈ ವಿಚಾರದಲ್ಲಿ ಯಾವುದೇ ದೂರುಗಳು ಸ್ವೀಕೃತವಾದರೆ ಆಯಾ ಕಾರಾಗೃಹದ ಮುಖ್ಯಸ್ಥರೇ ನೇರವಾಗಿ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಸಲಾಗಿದೆ.
ಈ ಕೂಲಿ ದರವು ಮೂರು ವರ್ಷಗಳವರೆಗೆ ಜಾರಿಯಲ್ಲಿದ್ದು, ಆನಂತರ ಮತ್ತೆ ಪರಿಷ್ಕರಣೆಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.