ಚುನಾವಣೆಯ ಕಾವು ಏರತೊಡಗಿದೆ, ಕೆಲವರು ಪಕ್ಷದ ಟಿಕೆಟ್‍ಗಾಗಿ ಪರದಾಡುತ್ತಿದ್ದರೆ, ಮತ್ತೆ ಕೆಲವರು ಪಕ್ಷದ ಟಿಕೆಟ್ ಪಡೆದು ಮತದಾರರ ಒಲವು ಪಡೆಯುವುದಕ್ಕಾಗಿ ಮನೆ ಮನೆಗೆ ಅಲೆಯುತ್ತಿದ್ದಾರೆ:

ಚಿತ್ರದುರ್ಗ, ಏ. 12- ಜಿಲ್ಲೆಯಲ್ಲಿ ಚುನಾವಣೆಯ ಕಾವು ಏರತೊಡಗಿದೆ, ಕೆಲವರು ಪಕ್ಷದ ಟಿಕೆಟ್‍ಗಾಗಿ ಪರದಾಡುತ್ತಿದ್ದರೆ, ಮತ್ತೆ ಕೆಲವರು ಪಕ್ಷದ ಟಿಕೆಟ್ ಪಡೆದು ಮತದಾರರ ಒಲವು ಪಡೆಯುವುದಕ್ಕಾಗಿ ಮನೆ ಮನೆಗೆ ಅಲೆಯುತ್ತಿದ್ದಾರೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಸಾಮಾನ್ಯ ಒಂದು ಎಸ್.ಟಿ. , ಎರಡು ಎಸ್.ಸಿ.ಗೆ ಮೀಸಲಾಗಿದೆ, ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಒಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತೊಂದು ಕ್ಷೇತ್ರದಲ್ಲಿ ಬಿಎಸ್‍ಆರ್ ಕಾಂಗ್ರೆಸ್‍ನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಈ ಬಾರಿಯೂ ಸಹ ತಮ್ಮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿಕ್ಕಾಗಿ ಹಾಲಿ ಶಾಸಕರುಗಳು ಹರ ಸಾಹಸ ಮಾಡುತ್ತಿದ್ದಾರೆ. ಅಲ್ಲದೆ ಕಳೆದ ಸಾರಿಗಿಂತ ಈ ಬಾರಿ ಸ್ಪರ್ಧೆ ಹೆಚ್ಚಾಗಿದೆ, ಕಳೆದ 5 ವರ್ಷದಲ್ಲಿ ವಿವಿಧ ರೀತಿಯ ಸಂಘಟನೆಗಳು ಪ್ರಾರಂಭವಾಗಿ ತಮ್ಮ ಅಭ್ಯರ್ಥಿಗಳನ್ನು ಸಹ ಕಣಕ್ಕೆ ಇಳಿಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್‍ನ ಭದ್ರಕೋಟೆ ಎಂದು ಹೆಸರಾಗಿತ್ತು ಆದರೆ ಕಳೆದ ಚುನಾವಣೆಯಲ್ಲಿ ಇದು ವಿರುದ್ದವಾಗಿ ನಾಲ್ಕು ಕಡೆಯಲ್ಲಿ ಮಾತ್ರವೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಈ ಬಾರಿ ಜಿಲ್ಲೆಯ ಆರು ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂಬ ಹಠದಲ್ಲಿ ಉತ್ತಮವಾದ ಅಭ್ಯರ್ಥಿಗಳ ಆಯ್ಕೆ ನಡೆಸಿ ಅಂತಿಮವಾಗಿ ಕಣಕ್ಕೆ ಇಳಿಸುತ್ತಿದೆ ಎಲ್ಲರಿಗೂ ತಿಳಿದಂತೆ ಈಗಾಗಲೇ ನಾಲ್ಕು ಕಡೆಗಳಲ್ಲಿ ಹಾಲಿ ಶಾಸಕರೇ ಸ್ಫರ್ಧೆ ನಡೆಸುತ್ತಿದ್ದು ಎರಡು ಕಡೆಯಲ್ಲಿ ಮಾತ್ರವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ.
ಕಳೆದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಖಾತೆಯನ್ನು ತೆರೆದು ಬಿಜೆಪಿ ಈ ಬಾರಿ ಅ ಸ್ಥಾನವನ್ನು ಉಳಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ. ಈ ಮಧ್ಯೆ ಜೆಡಿಎಸ್ ಸಹಾ ಈ ಚುನಾವಣೆಯಲ್ಲಿ ತನ್ನ ಪ್ರಾಬಲ್ಯವನ್ನು ತೋರುವುದರ ಮೂಲಕ ಕುಮಾರಸ್ವಾಮಿಯವರ 20 ತಿಂಗಳ ಕಾರ್ಯ ವೈಖರಿಯನ್ನು ಮತದಾರರ ಮುಂದೆ ಇಡುವುದರ ಮೂಲಕ ಮತಯಾಚನೆಯನ್ನು ಪ್ರಾರಂಭ ಮಾಡಿದೆ.
ಜೆಡಿಎಸ್‍ಗೆ ಬಣ್ಣದ ನಂಟು :
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಖ್ಯಾತ ಹಾಸ್ಯನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರರವರು ಜೆಡಿಎಸ್‍ನಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೀಗಾಗಿ ಮಾವ ದೊಡ್ಡಣ್ಣ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತನ್ನ ಅಳಿಯನ ಗೆಲುವಿಗಾಗಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಪ್ರಾರಂಭ ಮಾಡಿದ್ದಾರೆ. ಇದ್ದಲ್ಲದೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಕಾಂತರಾಜ್‍ಗೆ ಚಲನಚಿತ್ರದ ಸಂಪರ್ಕ ಇರುವುದರಿಂದ ವೀರೇಂದ್ರ ಅವರ ಪರ ಪ್ರಚಾರ ಮಾಡಲು ಹಲವಾರು ಕಲಾವಿದರು ಬಂದರು ಆಶ್ಚರ್ಯವಿಲ್ಲ.
ಗೊಂದಲದಲ್ಲಿ ಕಾಂಗ್ರೆಸ್:
ನಾಲ್ಕು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಖಚಿತವಾಗಿರುವುದರಿಂದ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಮಾತ್ರವೇ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಜಿಲ್ಲಾ ಕೇಂದ್ರವಾದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ 12 ರಿಂದ 15 ಜನ ಮೊಳಕಾಲ್ಮೂರಿಗೆ 4 ರಿಂದ 6 ಜನ ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಪಕ್ಷದ ವರಿಷ್ಟರಿಗೆ ಕಗ್ಗಂಟಾಗಿದೆ. ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಬೇಕು ಎನ್ನುವುದು ಕಾರ್ಯಕರ್ತರ ಬೇಡಿಕೆಯಾಗಿದೆ. ಆದರೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಮಾತ್ರ ಇದುವರೆವಿಗೂ ಬಹಿರಂಗಗೊಳ್ಳದಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲಿ ಕಾತುರ ಹೆಚ್ಚಾಗಿದೆ.
ಬಿಜೆಪಿ ಭಿನ್ನಮತ :
ಚುನಾವಣೆ ಇನ್ನು ಕೆಲವೇ ದಿನ ಇರಬೇಕಾದರೆ ಟಿಕೆಟ್ ಹಂಚಿಕೆಯಲ್ಲಿ ಪಕ್ಷದಲ್ಲಿ ಭಿನ್ನಮತ ಪ್ರಾರಂಭವಾಗಿದೆ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಹಾಲಿ ಶಾಸಕ ತಿಪ್ಪೇಸ್ವಾಮಿ ಬದಲಿಗೆ ಸಂಸದ ಶ್ರೀರಾಮುಲು ಅವರಿಗೆ ಬಿಜೆಪಿ ಟಿಕೆಟ್ ದೊರೆತಿರುವುದು ಕ್ಷೇತ್ರದಲ್ಲಿ ಗೊಂದಲ ಏರ್ಪಟ್ಟಿದೆ.
ಅಕಾಂಕ್ಷಿಗಳು ಟಿಕೆಟ್ ಪಡೆದು ಗೆಲುವು ಸಾಧಿಸುವ ಕನಸು ಕಾಣುತ್ತಿದ್ದರೆ, ಯಾರೂ ಬಂದರೂ ರಾಗಿ ಬೀಸೋದು ತಪ್ಪುವುದಿಲ್ಲ ಎಂಬ ನಾಣ್ಣುಡಿಯಂತೆ ಜಿಲ್ಲೆಯ ಮತದಾರ ಮಾತ್ರ ತನ್ನ ಕಾಯಕದಲ್ಲಿ ನಿರತನಾಗಿದ್ದು ಮೇ 12 ರಂದು ಯಾರಿಗೆ ಮತ ಚಲಾಯಿಸುತ್ತಾನೋ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ