ಬೆಂಗಳೂರು,ಏ.12- ಜಿದ್ದಾಜಿದ್ದಿನ ಕಣವಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವ ಸಾಧಿಸಲೇ ಬೇಕೆಂದು ಪಣ ತೊಟ್ಟಿರುವ ಬಿಜೆಪಿ ಏಪ್ರಿಲ್ 18 ರಿಂದ ಸ್ಟಾರ್ ಕ್ಯಾಂಪೇನ್(ತಾರಾ ಪ್ರಚಾರ)ಗೆ ಸಿದ್ಧತೆ ನಡೆಸಿ 20 ಬೃಹತ್ ಸಮಾವೇಶಗಳನ್ನು ನಡೆಸಲು ಯೋಜನೆ ರೂಪಿಸಿದೆ.
ಈ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೀದಾ ರುಪಯ್ಯ ಸರಕಾರ್, ಕಮೀಷನ್ ಸರಕಾರ್ಗಳಂಥ ಜನಪ್ರಿಯ ಹೇಳಿಕೆಗಳನ್ನು ನೀಡಿದ್ದ ಪ್ರಧಾನಿ ಮೋದಿ, ಅಂದು ಮೂರು ರೋಡ್ ಶೋ ಗಳಲ್ಲಿ ಭಾಗವಹಿಸುವರಲ್ಲದೆ, ಬೃಹತ್ ಸಮಾವೇಶಗಳಲ್ಲಿ ತಮ್ಮ ಭಾಷಣಗಳ ಮೂಲಕ ಮೋಡಿ ಮಾಡಲಿದ್ದಾರೆ.
ರಾಜ್ಯ ಚುನಾವಣಾ ಪ್ರಚಾರಕ್ಕೆ ಬರಲಿರುವ ಮತ್ತೋರ್ವ ತಾರಾ ಪ್ರಚಾರಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಿಂದುತ್ವದ ಪ್ರಭಾವ ಇರುವ ಕರಾವಳಿ ಜಿಲ್ಲೆಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.
ಕರ್ನಾಟಕದಲ್ಲಿ ಪ್ರಚಾರಕ್ಕೆ ಕನಿಷ್ಠ 15 ದಿನ ಸಮಯ ನೀಡುವುದಾಗಿ ಹೇಳಿರುವ ಯೋಗಿ ಆದಿತ್ಯನಾಥ, ದಿನವೊಂದಕ್ಕೆ ಎರಡರಿಂದ ಮೂರು ಸಮಾವೇಶಗಳಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. ಸುಮಾರು 10ಕ್ಕೂ ಬಹಿರಂಗ ಸಮಾವೇಶಗಳಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಅರುಣ್ ಜೈಟ್ಲಿ, ಸ್ಮತಿ ಇರಾನಿ, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಮಹಾರಾಷ್ಟ್ರ ಸಿ.ಎಂ ದೇವೇಂದ್ರ ಫಡ್ನವಿಸ್, ಮುಕ್ತಾರ್ ಅಬ್ಬಾಸ್ ನಖ್ವಿ, ಮಧ್ಯಪ್ರದೇಶ ಸಿ.ಎಂ ಶಿವರಾಜ್ ಸಿಂಗ್ ಚೌಹಾಣ್, ರಾಜನಾಥ್ ಸಿಂಗ್ ಸೇರಿದಂತೆ ಹಲವು ತಾರಾ ಪ್ರಚಾರಕರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಮೆಗಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.