ಚುನಾವಣಾ ಸಮಯ ಬಂದಾಗ ಸ್ವಜನ ಪಕ್ಷಪಾತ:

ಬೆಂಗಳೂರು,ಏ.12-ಚುನಾವಣಾ ಸಮಯ ಬಂದಾಗ ಸ್ವಜನ ಪಕ್ಷಪಾತ ಎಂಬುದು ಎಲ್ಲೆಡೆ ಕಾಣುತ್ತದೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಕುಟುಂಬಗಳು ತಮ್ಮ ಬಂಧುಗಳು ಹಾಗೂ ಸಂಬಂಧಿಕರನ್ನು ರಾಜಕೀಯಕ್ಕೆ ತರಲು ವೇದಿಕೆ ಸಿದ್ಧಪಡಿಸುತ್ತಿದ್ದಾರೆ.

ದೇವೇಗೌಡ ಕುಟುಂಬ, ಬಳ್ಳಾರಿ ರೆಡ್ಡಿ ಕುಟುಂಬ ಖರ್ಗೆ ಸೇರಿದಂತೆ ಕರ್ನಾಟಕದಲ್ಲಿ ಸುಮಾರು 200 ಕುಟುಂಬಗಳು ಜಿಲ್ಲಾ ಪಂಚಾಯಿತಿ, ಶಾಸಕ ಹಾಗೂ ಸಂಸದ ಚುನಾವಣೆಯಲ್ಲಿ ಪಾಲ್ಗೊಂಡಿವೆ. ಕಾಂಗ್ರೆಸ್ ನ ಸುಮಾರು 28 ಫ್ಯಾಮಿಲಿಗಳು ಹಾಗೂ ಜೆಡಿಎಸ್ ಮತ್ತು ಬಿಜೆಪಿಯ 4 ರಿಂದ 5 ಕುಟುಂಬಗಳು ಕುಟುಂಬ ರಾಜಕೀಯದಲ್ಲಿವೆ.
ತಮ್ಮ ಪುತ್ರ ಹಾಗೂ ಪುತ್ರಿಯರನ್ನು ಮಾತ್ರ ರಾಜಕೀಯಕ್ಕೆ ತರದೇ ಮೊಮ್ಮಕ್ಕಳು ಹಾಗೂ ಬಂಧುಗಳನ್ನು ವಿಧಾನಸೌಧಕ್ಕೆ ಕರೆತರಲು ಹಲವರು ಹರ ಸಾಹಸ ಪಡುತ್ತಿದ್ದಾರೆ, ಜೊತೆಗೆ ಸೇಫ್ ಆಗಿರುವ ಕ್ಷೇತ್ರಗಳಲ್ಲಿ ಅವರಿಗೆ ಟಿಕೆಟ್ ಕೊಡಿಸಲು ಸಿದ್ದತೆ ನಡೆಸುತ್ತಿದ್ದಾರೆ.

ರಾಜ್ಯದ ಎರಡು ಪ್ರಭಾವಶಾಲಿ ರಾಜಕೀಯ ಕುಟುಂಬಗಳು ಮೈಸೂರಿನ ವರುಣಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿಗೆ ಇಳಿದಿವೆ, ಸಿಎಂ ಸಿದ್ದರಾಮಯ್ಯ 2008 ರಲ್ಲಿ ಸ್ಪರ್ದಿಸಿದ್ಧ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರ ಹಾಗೂ ಯಡಿಯೂರಪ್ಪ ಪುತ್ರರ ಕದನ ಕಾಳಗ ಆರಂಭವಾಗಿದೆ.
ಕುಟುಂಬ ರಾಜಕೀಯದಿಂದ ಬಂದ ಮಾತ್ರಕ್ಕೆ ವ್ಯಕ್ತಿಯೊಬ್ಬ ದೀರ್ಘ ಕಾಲದ ಯಶಸ್ಸು ಕಾಣಲು ಸಾಧ್ಯವಿಲ್ಲ, ತಮ್ಮ ಕಾರ್ಯಕ್ಷಮತೆ ಹಾಗೂ ಜನರ ನಿರೀಕ್ಷೆಗಳನ್ನು ಈಡೇರಿಸಿದಾಗ ಮಾತ್ರ ದೀರ್ಘ ಕಾಲದ ರಾಜಕೀಯದಲ್ಲಿ ಜನತೆ ಆತನನ್ನು ಒಪ್ಪಲು ಸಾಧ್ಯ, ಇದಕ್ಕೆ ಜ್ವಲಂತ ಉದಾಹರಣೆ ರಾಹುಲ್ ಗಾಂಧಿ, ಇಂದಿಗೂ ರಾಜಕೀಯವಾಗಿ ಬೆಳೆಯಲು ಹೋರಾಟ ನಡೆಸುತ್ತಿದ್ದಾರೆ.

ಕೆಲವು ಪ್ರಬಾವಿ ರಾಜಕೀಯ ಕುಟುಂಬಗಳು ನಿರಂತರವಾಗಿ ಅಧಿಕಾರದಲ್ಲಿ ಉಳಿಯಲು ಯತ್ನಿಸುತ್ತವೆ, ಅಮೆರಿಕಾ ರಾಜಕೀಯದಲ್ಲಿ 750 ಕುಟುಂಬಗಳು ತಮ್ಮ ಹಿಡಿತ ಸಾಧಿಸಿದ್ದರೇ ಭಾರತದಲ್ಲಿ 15 ಸಾವಿರ ಕುಟುಂಬ ಹಾಗೂ ಕರ್ನಾಟಕದಲ್ಲಿ 200 ಕುಟುಂಬಗಳು ರಾಜಕೀಯವಾಗಿ ಕಾರುಬಾರು ನಡೆಸುತ್ತಿವೆ.

ತಮ್ಮ ಕುಟುಂಬದ ಸದಸ್ಯರನ್ನು ರಾಜಕೀಯಕ್ಕೆ ತರುವುದು, ಗರಿಷ್ಠ ಮಂದಿಗೆ ಟಿಕೆಟ್ ಕೇಳುವುದು ಕಾಂಗ್ರೆಸ್ ನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ, ಹಲವು ಶಾಸಕರು ಹಾಗೂ ಸಚಿವರುಗಳ ಪುತ್ರ ಪುತ್ರಿಯರು ಸೇರಿದಂತೆ ಸುಮಾರು 25ರಿಂದ 30 ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ, ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುವುದು ಜೊತೆಗೆ ಸೇಫ್ ಆಗಿರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಡುತ್ತಿದ್ದಾರೆ, ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಸುರಕ್ಷಿತವಾಗಿರುವ ಕಲಬುರಗಿ ಗ್ರಾಮೀಣ ಕ್ಷೇತ್ರಕ್ಕೆ ಶಿಫ್ಟ್ ಆಗುತ್ತಿದ್ದಾರೆ.

ಇದು ಕೇವಲ ಸಿದ್ದರಾಮಯ್ಯ ಮತ್ತು ಖರ್ಗೆ ಕುಟುಂಬದ ಮಾತಲ್ಲ, ರಾಮಲಿಂಗಾ ರೆಡ್ಡಿ, ಎಚ್ ಸಿ ಮಹಾದೇವಪ್ಪ, ಟಿ.ಬಿ ಜಯಚಂದ್ರ, ಸೇರಿದಂತೆ ಹಲವರು ತಮ್ಮ ಕ್ಷೇತ್ರಗಳನ್ನು ತಮ್ಮ ಮಕ್ಕಳಿಗೆ ನೀಡಿ ತಾವು ಬೇರೆಡೆ ಸ್ಥಳಾಂತರವಾಗುತ್ತಿದ್ದಾರೆ.

ನಾನು ಜಯನಗರದಿಂದ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ನಾನು ಬಿಟಿಎಂ ಲೇಔಟ್ ಗೆ ಶಿಫ್ಟ್ ಆದ ನಂತರ ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು,. ನಾನು ಜಯನಗರ ಕ್ಷೇತ್ರದಿಂದ ನನ್ನ ಮಗಳಿಗೆ ಟಿಕೆಟ್ ಕೇಳುತ್ತಿದ್ದೇನೆ, ಕೆಲ ಕಾಂಗ್ರೆಸ್ ನಾಯಕರಿಗೆ ಇದು ಒಪ್ಪಿಗೆಯಾಗಿದ್ದು, ಆಕೆ ವಿದ್ಯಾವಂತೆ ಮತ್ತ ಸಮರ್ಥಳಾಗಿದ್ದಾಳೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಅದೇ ಕ್ಷೇತ್ರದಲ್ಲಿ ಹಿರಿಯ ಹಾಗೂ ಅನುಭವಿ ಅಭ್ಯರ್ಥಿಗಳಿರುವಾಗ ಮಗಳಿಗೆ ಟಿಕೆಟ್ ಕೇಳುವುದು ಸರಿಯೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾ ರೆಡ್ಡಿ,ಅವರಿಗೆ ಈಗಾಗಲೇ ಅವಕಾಶ ನೀಡಲಾಗಿತ್ತು, ಆದರೆ ಆ ಕ್ಷೇತ್ರದಲ್ಲಿ ಅವರು ಜಯ ಗಳಿಸಿದ್ದರೇ ಎಂಬುದಾಗಿ ಮರು ಪ್ರಶ್ನಸಿದ್ದಾರೆ,
ಜಯನಗರದಲ್ಲಿ ಕಾಂಗ್ರೆಸ್ ಗೆ ಎಷ್ಟು ಪ್ರಮಾಣದಲ್ಲಿ ಬೆಂಬಲವಿದೆಯೇ ಬಿಜೆಪಿಗೆ ಕೂಡ ಅಷ್ಟೆ ಪ್ರಮಾಣದಲ್ಲಿ ಬೆಂಬಲವಿದೆ, ಕಾಂಗ್ರೆಸ್ ಹಾಗೂ ಬಿಜೆಪಿಯ ಸಾಂಪ್ರದಾಯಿಕ ಮತದಾರರು ತಮ್ಮ ಪಕ್ಷಗಳಿಗೆ ತಮ್ಮ ಮತವನ್ನು ಚಲಾಯಿಸುತ್ತಾರೆ, ಕಾಂಗ್ರೆಸ್ ಗೆ ಹೋಲಿಸಿದರೇ ಬಿಜೆಪಿಯಿಂದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕುಟುಂಬ ರಾಜಕೀಯದಲ್ಲಿ ತೊಡಗಿವೆ,
ಇನ್ನೂ ರಾಜ್ಯದಲ್ಲಿ ಕುಟುಂಬ ರಾಜಕೀಯಕ್ಕೆ ಹೆಸರಾಗಿರುವುದು ದೇವೇಗೌಡರ ಫ್ಯಾಮಿಲಿ. ಇವರ ಕುಟುಂಬ ರಾಜಕೀಯ ಹಲವು ಕ್ಷೇತ್ರಗಳ ವರೆಗೂ ವ್ಯಾಪಿಸಿದೆ, ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ, ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ, ಅವರ ಸಹೋದರ ಎಚ್.ಡಿ ರೇವಣ್ಣ ತಮ್ಮ ತವರಾದ ಹೊಳೆ ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.ಜೊತೆಗೆ ಸೊಸೆಯಂದಿರಾದ ಅನಿತಾ ಕುಮಾರ ಸ್ವಾಮಿ ಮತ್ತು ಭವಾನಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಕೂಡ ಟಿಕೆಟ್ ನ ಆಕಾಂಕ್ಷಿಗಳಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ