ಬೆಂಗಳೂರು, ಏ.11- ಒಂದು ಕೆಜಿ ಚಿನ್ನ ಕೊಡುವುದಾಗಿ ನಂಬಿಸಿ 15 ಲಕ್ಷ ರೂ. ಲಪಟಾಯಿಸಿ ಪರಾರಿಯಾಗಿದ್ದ ಇಬ್ಬರು ಕುಖ್ಯಾತ ಅಂತರಾಜ್ಯ ವಂಚಕರನ್ನು ಆವಲಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಆರು ಲಕ್ಷ ಹಣ ಮತ್ತು ಏಳು ಲಕ್ಷ ಬೆಲೆ ಬಾಳುವ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಮದನಪಲ್ಲಿ ತಾಲ್ಲೂಕು ಚೊಮ್ಮಲೂರು ಮಂಡಲಂನ ಮಂಡಕಾಡಪಲ್ಲಿ ಗ್ರಾಮದ ವೆಂಕಟೇಶ್ ಅಲಿಯಾಸ್ ಶ್ರೀನಿವಾಸ್(59), ಇದೇ ಗ್ರಾಮದ ಇ.ಚಂದ್ರ ಬಂಧಿತ ಆರೋಪಿಗಳು.
ಆಂಧ್ರಪ್ರದೇಶದ ಪುಂಗನೂರಿನ ನಾಗರಾಜ ಹಾಗೂ ಕಂದೂರಿನ ಸುರೇಂದ್ರ, ಮದನಪಲ್ಲಿಯ ವೇರಪ್ಪ ನಾಯ್ಡು ಮತ್ತು ಕೋಲಾರ ಜಿಲ್ಲೆ ಬಂಗಾರಪೇಟೆಯ ಸುಬ್ರಹ್ಮಣಿ, ನಂದಿಪಲ್ಲಿಯ ಮಂಜುನಾಥ ಎಂಬುವರು ತಲೆಮರೆಸಿಕೊಂಡಿದ್ದು , ಅವರ ಬಂಧನಕ್ಕೆ ಪೆÇಲೀಸರು ಬಲೆ ಬೀಸಿದ್ದಾರೆ.
ಮಾ.1ರಂದು ತ್ಯಾಗರಾಜು ಎಂಬುವರಿಗೆ ಆರೋಪಿ ವೆಂಕಟೇಶ್ ತನ್ನ ಬಳಿ ಒಂದು ಕೆಜಿ ಚಿನ್ನವಿದೆ. ಅದನ್ನು ಮಾರಾಟ ಮಾಡಬೇಕಾಗಿದೆ ಎಂದು ನಂಬಿಸಿದ್ದ. ಆವಲಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ಕಿತ್ತಗನೂರು-ಬಿದರಹಳ್ಳಿ ರಸ್ತೆ ಬಳಿ 15 ಲಕ್ಷ ರೂ.ಗಳನ್ನು ತರುವಂತೆ ಆರೋಪಿಯು ತ್ಯಾಗರಾಜು ಅವರಿಗೆ ತಿಳಿಸಿದ್ದ. ಅದರಂತೆ ಅವರು 15ಲಕ್ಷ ರೂ.ಗಳನ್ನು ತೆಗೆದುಕೊಂಡು ಬಂದಾಗ ಆರೋಪಿ ವೆಂಕಟೇಶ್ ಆ ಹಣವನ್ನು ತಾನು ತೆಗೆದುಕೊಂಡು ನನ್ನ ಮನೆ ಹತ್ತಿರದಲ್ಲೇ ಇದೆ ಬನ್ನಿ ನಿಮಗೆ ಚಿನ್ನ ಕೊಡುತ್ತೇವೆ ಎಂದು ಹೇಳಿ ಕರೆದೊಯ್ಯುತ್ತಿದ್ದಾಗ ಟಾಟಾಸುಮೋವೊಂದರಲ್ಲಿ ಬಂದ ಮೂರ್ನಾಲ್ಕು ಜನ ಅಪರಿಚಿತರು ವೆಂಕಟೇಶನಿಗೆ ಹಲ್ಲೆ ಮಾಡಿ ವಾಹನದಲ್ಲಿ ಹಾಕಿಕೊಂಡು ಹೋಗಿದ್ದರು.
ಈ ಸಂಬಂಧ ತ್ಯಾಗರಾಜು ಅವರು ಆವಲಹಳ್ಳಿ ಠಾಣೆಗೆ ದೂರು ನೀಡಿದ್ದರು. ಪಿಎಸ್ಐ ಅವರು ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಿದ್ದರು.
ಏ.8ರಂದು ಆರೋಪಿಗಳಾದ ವೆಂಟೇಶ ಮತ್ತು ಇ.ಚಂದ್ರ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ನಾಗರಾಜ, ಸುರೇಂದ್ರ, ವೇರಪ್ಪ ನಾಯ್ಡು, ಸುಬ್ರಹ್ಮಣಿ, ಮಂಜುನಾಥ್ ಅವರೊಂದಿಗೆ ಸೇರಿ ಹಣ ದೋಚುವ ಸಲುವಾಗಿ ಟಾಟಾ ಸುಮೋ ವಾಹನ ಬಳಸಿ 15ಲಕ್ಷ ರೂ. ವಂಚಿಸಿರುವುದು ಗೊತ್ತಾಗಿದೆ.
ಬೆಂಗಳೂರು ಜಿಲ್ಲಾ ಪೆÇಲೀಸ್ ಅಧೀಕ್ಷಕ ಭೀಮಾಶಂಕರ್ ಆರ್.ಗುಳೇದ, ಅಪರ ಪೆÇಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಹೊಸಕೋಟೆ ವಿಭಾಗದ ಉಪ ಅಧೀಕ್ಷಕ ಕುಮಾರ್.ಎನ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ಮಂಜುನಾಥ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.